

ಬೆಂಗಳೂರು: ಪೊಲೀಸರೆಂದರೆ ರಕ್ಷಕರು ಎನ್ನುತ್ತಾರೆ. ಆದರೆ ಅದೇ ಪೊಲೀಸರು ಪ್ರಾಣ ತೆಗೆಯುವವರಾಗಿ ಬದಲಾಗಿಬಿಟ್ಟರೆ? ಆ ರೀತಿಯ ಘಟನೆ ನಿಜವಾಗಿಯೂ ಬೆಂಗಳೂರಿನಲ್ಲಿ ನಡೆದಿದೆ. ನಗರದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಮುಖ ಪ್ರಾಣಿಯೊಂದರ ಮೇಲೆ ಅಮಾನವೀಯವಾಗಿ ಕಾರು ಹತ್ತಿಸಿ ದುಷ್ಕೃತ್ಯ ಮೆರೆದಿದ್ದಾರೆ.
ದೊಡ್ಡಕಮ್ಮನಹಳ್ಳಿಯ ನಿವಾಸಿ 65 ವರ್ಷದ ನಿವೃತ್ತ ಸಬ್ಇನ್ಸ್ಪೆಕ್ಟರ್ ನಾಗೇಶಯ್ಯ, ತಮ್ಮ ನಿವಾಸದ ಬಳಿ ತಮ್ಮ ಮಗನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ರಸ್ತೆಯಲ್ಲಿ ನಾಯಿಯೊಂದು ನಡೆಯಲಾಗದೆ, ಕುಟುಂತಾ ಬಿದ್ದಿತ್ತು. ಅದನ್ನು ಕಂಡರೂ ಕಾಣದಂತೆ ನಾಗೇಶಯ್ಯ ನಾಯಿಯ ಮೇಲೇ ಕಾರು ಹತ್ತಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ತುಣುಕು ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಪ್ರಾಣಿಪ್ರೇಮಿಗಳ ಮನ ಕಿವುಚಿದೆ.
ನಡೆಯಲು ಕಷ್ಟ ಪಡುತ್ತಿದ್ದ ಬೀದಿನಾಯಿಯ ಮೇಲೆ ಕಾರಿನ ಟೈರ್ ಹತ್ತಿಸಿ ಹೋದ ಮೇಲೆ ನಾಯಿ ಅರೆಜೀವವಾಗಿ ನರಳುವುದನ್ನು ವೀಡಿಯೋದಲ್ಲಿ ಕಾಣಬಹುದು. ಬೀದಿಯಲ್ಲಿ ನರಳುತ್ತಾ ಬಿದ್ದಿದ್ದ ನಾಯಿಯನ್ನು ದಾರಿಹೋಕರೊಬ್ಬರು ಬೆಂಗಳೂರು ಮಹಾನಗರ ಪಾಲಿಕೆಯ ಪಶುಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದಿದ್ದಾರೆ.
ಪಾಲಿಕೆಯ ಪಶುವೈದ್ಯ ಡಾ.ರಮೇಶ್ ಅವರ ದೂರಿನ ಮೇಲೆ ನಾಗೇಶಯ್ಯ ಅವರ ಮೇಲೆ ಪ್ರಿವೆಂಶನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ ಆ್ಯಕ್ಸ್ ಮತ್ತು ಐಪಿಸಿ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.
ದೇವರ ದಯೆ, ನಾಯಿ ಇನ್ನೂ ಬದುಕಿದೆ. ಬೊಜೊ ವಾಗ್ಸ್ ವೆಟರ್ನರಿ ಆಸ್ಪತ್ರೆಯಲ್ಲಿ ನಾಯಿಯ ಆರೈಕೆ ನಡೆಯುತ್ತಿದೆ. (ಏಜೆನ್ಸೀಸ್)