ಬೆಂಗಳೂರು ಉತ್ತರ ವಿವಿ 5ನೇ ಘಟಿಕೋತ್ಸವ

bnu press meet
ಕೋಲಾರ ನಗರದ ಬೆಂಗಳೂರು ಉತ್ತರ ವಿವಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿದರು. ಪ್ರೊ.ಲೋಕನಾಥ ಇದ್ದರು.
Published on

ಕೋಲಾರ: ನಗರ ಹೊರವಲಯದ ನಂದಿನಿ ಪ್ಯಾಲೇಸ್​ನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವವನ್ನು ಆ.1ರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು.

ನಗರದ ಉತ್ತರ ವಿವಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಧಾಕೃಷ್ಣ ಅಡಿಗ, ಡಾ.ಎಚ್​.ಎಸ್​.ಶೆಟ್ಟಿ, ಪಿಚ್ಚಳ್ಳಿ ಶ್ರೀನಿವಾಸ್​ ಅವರ ಸೇವೆ ಗುರುತಿಸಿ ವಿವಿಯಿಂದ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಗುವುದು, ಈ ವೇಳೆ ಒಟ್ಟು 46 ಮಂದಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಅಧ್ಯಕ್ಷತೆ ವಹಿಸಲಿದ್ದು, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ ಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್​ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿವಿಯ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್​.ಲೋಕನಾಥ್​ ಇದ್ದರು.

* ಪದವೀಧರರ ವಿವರ

ಪ್ರಸಕ್ತ ಸಾಲಿನಲ್ಲಿ ಪದವಿಗಳಲ್ಲಿ ಚಿನ್ನದ ಪದಕ ಪಡೆದುಕೊಂಡವರಲ್ಲಿ ಪಿಜಿ 26, ಯುಜಿ 18, ಬಿಇಡಿ, ಬಿಪಿಎಡಿ ತಲಾ ಒಂದು ಪದಕಗಳಿಸಿದ್ದಾರೆ. ಒಟ್ಟು 23,126 ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳುತ್ತಿದ್ದು, ಆ ಪೈಕಿ ಪದವಿಯಲ್ಲಿ 12,550 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿಯಲ್ಲಿ 3,993, ಬಿ.ಇಡಿ ಮತ್ತು ಬಿಪಿಇಡಿನಲ್ಲಿ 170 ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 4,069 ಹಾಗೂ ಪಿ ಡಿಪ್ಲೊಮಾ ಪೂರೈಸಿರುವ 9 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ ಎಂದು ಪ್ರೊ.ನಿರಂಜನ ವಿವರಿಸಿದರು.

ಗೌರವ ಡಾಕ್ಟರೇಟ್​ಗೆ ಪಾತ್ರರಾದವರು

1.ರಾಧಾಕೃಷ್ಣ ಅಡಿಗ

ಬೆಂಗಳೂರಿನ ಹೋಟೆಲ್​ ಉದ್ಯಮಿಗಳ ಕುಟುಂಬದಲ್ಲಿ 1963ರ ಆ.1ರಂದು ಜನಿಸಿರುವ ರಾಧಾಕೃಷ್ಣ ಅಡಿಗ ಒಂಬತ್ತನೇ ವಯಸ್ಸಿನಲ್ಲೇ ಅಪ್ಪನ "ಬ್ರಾಹ್ಮಿನ್ಸ್​ ಕಾಫಿ ಬಾರ್​' ನಲ್ಲಿ ಕೆಲಸಕ್ಕೆ ಸೇರಿದ್ದರು. ಇಂದಿಗೆ 50 ವರ್ಷಗಳ ಹಿಂದೆ ತಂದೆ ಆರಂಭಿಸಿದ ಹೋಟೆಲ್​ ಉದ್ಯಮವನ್ನು ಯಶಸ್ವಿಯಾಗಿ ಹಾಗೂ ಜನಪ್ರಿಯವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಆಂಧ್ರದ ತಿರುಪತಿ ವೆಂಕಟೇಶ್ವರ ದೇವಾಲಯದ (ಟಿಟಿಡಿ) ಟ್ರಸ್ಟಿಯಾಗಿ, ಕೊಲ್ಲೂರು ಮತ್ತು ಶಂಕರನಾರಾಯಣ ದೇವಾಲಯಗಳ ಅಭಿವೃದ್ಧಿಯ ಪಾತ್ರಧಾರಿಯಾಗಿಯಾಗಿದ್ದಾರೆ. ಇವರ ಸಾಮಾಜಿಕ ಸೇವೆಗೆ ಆರ್ಯಭಟ ಪ್ರಶಸ್ತಿ ಮತ್ತು ಕೆಂಪೇಗೌಡ ಪ್ರಶಸ್ತಿ ಲಭಿಸಿದೆ. ಅಡಿಗರ ಸೇವೆ ಗುರುತಿಸಿ "ಉದ್ಯಮಶೀಲತೆ"ಯ ವಿಭಾಗದಿಂದ ಡಿ.ಲಿಟ್​ ಪದವಿ ನೀಡಲಾಗುತ್ತಿದೆ.

2. ಡಾ.ಎಚ್​.ಎಸ್​.ಶೆಟ್ಟಿ

ಮೈಸೂರು ಮರ್ಕಂಟೈಲ್​ ಕಂಪನಿ ಮಾಲೀಕ ಡಾ.ಎಚ್​.ಎಸ್​.ಶೆಟ್ಟಿ ಅವರು ಸಮಾಜ ಸೇವಾ ಗೌರವಕ್ಕೆ ಭಾಜನರಾಗಿದ್ದಾರೆ. 1959ರ ಜುಲೈ 19ರಂದು ಜನಿಸಿದ ಅವರು, ಸಣ್ಣ ವಯಸ್ಸಿನಲ್ಲೇ ಕೆಲಸಕ್ಕಾಗಿ ಮುಂಬೈನಿಂದ ಬಟ್ರೇನ್​ಗೆ ಹೋಗಿ, ಮತ್ತೆ ವಾಪಸ್ಸು ಬೆಂಗಳೂರಿಗೆ ಬಂದು, ಮೈಸೂರು ಮರ್ಕಂಟೈಲ್​ ಕಂಪನಿ ಸ್ಥಾಪಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕರ್ನಾಟಕದ ಅತ್ಯುತ್ತಮ ರಫ್ತುದಾರರಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ತಂದೆ ಹೆಗ್ಗುಂಜೆ ರಾಜೀವ್​ ಶೆಟ್ಟಿ ಹೆಸರಿನಲ್ಲಿ ಸ್ಥಾಪಿಸಿರುವ ಚಾರಿಟಬಲ್​ ಟ್ರಸ್ಟ್​, ದಕ್ಷಿಣ ಕನ್ನಡದ ಸೂರಿಲ್ಲದ ಕೊರಗರಿಗೆ ನೂರು ಮನೆಗಳನ್ನು ಕಟ್ಟಿಕೊಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ರಾಜ್ಯದ 40,000ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಿದ್ದಾರೆ. ರಾಜ್ಯದ ಪ್ರಪ್ರಥಮ ಖಾಸಗಿ ಪಾಲುದಾರತ್ವದ ಸರ್ಕಾರಿ ಶಾಲೆಯ ಸ್ಥಾಪನೆಗೆ ಕಾರಣರಾಗಿದ್ದಾರೆ. ಡಾ.ಎಚ್​.ಎಸ್​.ಶೆಟ್ಟಿ ಅವರ ಸೇವೆಯನ್ನು ಗುರುತಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು "ಸಮಾಜ ಸೇವಾ' ವಿಭಾಗದಿಂದ ಡಿ.ಲಿಟ್​ ಪದವಿ ನೀಡಿ ಗೌರವಿಸಲು ತೀರ್ಮಾನಿಸಿದೆ.

3. ಪಿಚ್ಚಳ್ಳಿ ಶ್ರೀನಿವಾಸ್​

ಮೂಲತ@ ಕೋಲಾರದವರೆ ಆಗಿರುವ ಪಿಚ್ಚಳ್ಳಿ ಶ್ರೀನಿವಾಸ್​ ಪದವಿಗೆ ಭಾಜನರಾಗಿದ್ದು, 1963ರ ಜೂನ್​ 1ರಂದು ಜನಿಸಿದ ಅವರು ರಂಗಭೂಮಿ, ನಾಟಕ, ಹಾಡುಗಾರರಾಗಿ ಗುರುತಿಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ. ರಂಗಭೂಮಿಯ ಭೀಷ್ಮ ಎನಿಸಿಕೊಂಡ ಬಿ.ವಿ.ಕಾರಂತರಿಂದ ಆಯ್ಕೆಗೊಂಡು ಮೈಸೂರಿನ ರಂಗಾಯಣ ಕಲಾವಿದರಾಗಿ ಸೇವೆಗೈದರು. ರಂಗಾಯಣ ಅರ್ಪಿಸಿದ ಅನೇಕ ನಾಟಕಗಳಲ್ಲಿ ಮುಖ್ಯ ಪಾತ್ರಧಾರಿಗಳಾಗಿ ಹಾಗೂ ಸಂಗೀತ ಕಲಾವಿದರಾಗಿ ಪಿಚ್ಚಳ್ಳಿ ಸೇವೆ ಸಲ್ಲಿಸಿದ್ದಾರೆ. "ಸಾರಂಗ ರಂಗ" ಸಂಸ್ಥೆಯ ಮೂಲಕ ಮಾಡುತ್ತಿರುವ ಕಲಾ ಮತ್ತು ಸಂಸತಿ ಸೇವೆ ಅನನ್ಯ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ.ಬಿ.ಆರ್​.ಅಂಬೇಡ್ಕರ್​ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಸಂಸತಿಯ ಅವಿಭಾಜ್ಯ ಅಂಗವಾಗಿರುವ ಪಿಚ್ಚಳ್ಳಿ ಶ್ರೀನಿವಾಸ್​ ಸೇವೆಯನ್ನು ಗುರುತಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಐದನೇ ಘಟಿಕೋತ್ಸವದಲ್ಲಿ "ಸಂಗೀತ ಮತ್ತು ರಂಗಭೂಮಿ" ವಿಭಾಗದಿಂದ ಗೌರವ ಡಾಕ್ಟರೇಟ್​ನೀಡುತ್ತಿದೆ.

ಆರೋಪ ಸಾಬೀತಾದರೆ ಶಿೆಯಾಗಲಿ

ವಿವಿಯಲ್ಲಿ ಅಕ್ರಮ ನಡೆದಿವೆ ಎಂಬ ಆರೋಪ ಕೇಳಿ ಬಂದಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಆರೋಪಗಳು ಸಾವಿರ ಬರುತ್ತವೆ, ಈ ಮೊದಲು ರಾಜ್ಯಪಾಲರಿಗೂ ದೂರು ನೀಡಿದ್ದರು, ಆದರೆ ಇದುವರೆಗೂ ಏನಾಯಿತು. ನಾನು ಇನ್ನು ನಾಲ್ಕು ತಿಂಗಳು ಕೋಲಾರದಲ್ಲೇ ಇರುತ್ತೇನೆ, ಆರೋಪ ಸಾಬೀತಾದರೆ ಶಿೆಯಾಗಲಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net