

ಬೆಂಗಳೂರು: ಚೀನಾ ಸೇರಿ ಹೊರ ದೇಶಗಳಲ್ಲಿ ಕೋವಿಡ್ ಹೆಚ್ಚಳ ಹಾಗೂ ಹೊಸ ವರ್ಷಕ್ಕೆ ಜನಸಂದಣಿ ಉಂಟಾಗುವ ಹಿನ್ನೆಲೆಯಲ್ಲಿ ನಗರದಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಬಗ್ಗೆ ಬಿಬಿಎಂಪಿ ನಿರ್ಧರಿಸಿದೆ.
ಕೋವಿಡ್ ಸಲಹಾ ಸಮಿತಿಗೆ ಈಗಾಗಲೇ ಪಾಲಿಕೆ ಮನವಿ ಸಲ್ಲಿಸಿದ್ದು, ಒಂದು ವೇಳೆ ಮಾಸ್ಕ್ ಬಳಕೆಗೆ ಸಮಿತಿ ಅನುಮತಿ ಕೊಟ್ಟರೆ ಮಾರುಕಟ್ಟೆ, ಮಾಲ್, ಥಿಯೇಟರ್, ಮೆಟ್ರೋ, ಬಸ್, ರೈಲು ಹಾಗೂ ವಿಮಾನ ನಿಲ್ದಾಣಗಳ ಸೇರಿ ಸಾರ್ವಜನಿಕರ ಸ್ಥಳಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಲಿದೆ. ಆದೇಶ ಹೊರಡಿಸುವ ಸಂಬಂಧ ಪಾಲಿಕೆ, ಕೋವಿಡ್ ಸಲಹಾ ಸಮಿತಿಯ ಅನುಮತಿಗಾಗಿ ಕಾಯುತ್ತಿದೆ.
ಕರೊನಾ ಕೇಸ್ಗಳು ಗಣನೀಯವಾಗಿ ಕುಸಿತವಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಮಾಸ್ಕ್ ಬಳಸುವುದನ್ನು ಪಾಲಿಕೆ ನಿಲ್ಲಿಸಿತ್ತು. ಆದರೆ, ನೆರೆಯ ಚೀನಾದಲ್ಲಿ ದೈನಂದಿನ ಕರೊನಾ ಕೇಸ್ಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೇ ದೇಶದಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಮತ್ತು ತಜ್ಞರ ಜತೆ ಸಭೆ ನಡೆದಿದೆ. ಒಂದು ವೇಳೆ ಸಮಿತಿ ಮಾಸ್ಕ್ ಬಳಸಲು ಮಾರ್ಗಸೂಚಿ ಹೊರಡಿಸಿದರೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮತ್ತೆ ಜನರು ಮಾಸ್ಕ್ ಉಪಯೋಗಿಸುವುದು ಕಡ್ಡಾಯ ಆಗಲಿದೆ. ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೊರದೇಶಗಳಿಂದ ನಗರಕ್ಕೆ ಸಾವಿರಾರು ವಿದೇಶಿಗರು ಆಗಮಿಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಕರೊನಾ ಸೋಂಕು ಹರಡುವ ಸಂಭವ ಇದೆ. ಹೀಗಾಗಿ, ಮೊದಲ ಹಂತದಲ್ಲಿ ಯಾವುದೇ ದಂಡರಹಿತವಾಗಿ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲು ಪಾಲಿಕೆ ಉದ್ದೇಶ ಹೊಂದಿದೆ.
1,228 ಸಕ್ರಿಯ ಕೇಸ್ಗಳು:
ನಗರದಲ್ಲಿ ಈವರೆಗೆ ದಾಖಲಾದ 18,76,512 ಕರೊನಾ ಕೇಸ್ಗಳ ಪೈಕಿ 18,57,781 ಮಂದಿ ಗುಣಮುಖರಾದರೆ, 16,990 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ 1,228 ಸಕ್ರಿಯ ಕೇಸ್ಗಳಿವೆ. ನಗರದಲ್ಲಿ ಪ್ರತಿ ನಿತ್ಯ ಸರಾಸರಿ 10-15 ಕೇಸ್ಗಳ ಅಸುಪಾಸಿನಲ್ಲಿ ವರದಿಯಾಗುತ್ತಿವೆ. 140 ಕೋವಿಡ್ ಪರೀಕ್ಷೆ ಮತ್ತು ಲಸಿಕಾ ಕೇಂದ್ರಗಳಿದ್ದರೆ, 49 ಕೋವಿಡ್ ಹಾರೈಕೆ ಕೇಂದ್ರಗಳಿವೆ.
'ಕೋವಿಡ್ ಸಲಹಾ ಸಮಿತಿಯು ಬಿಬಿಎಂಪಿಗೆ ಅನುಮತಿ ಕೊಟ್ಟರೆ ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಬಳಕೆಗೆ ಕಡ್ಡಾಯ ಮಾಡಲಾಗುವುದು. ಸಮಿತಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕರು ಮಾಸ್ಕ್ ಕಡ್ಡಾಯ ಮಾಡಬೇಕೆ ಅಥವಾ ಇಲ್ಲವೋ ಎಂಬುದರ ಬಗ್ಗೆ ಸದ್ಯದಲ್ಲೇ ನಿರ್ಧಾರವಾಗಲಿದೆ' ಎಂದು ಪಾಲಿಕೆಯ ಆರೋಗ್ಯ ವಿಭಾಗದ ಆಯುಕ್ತ ತ್ರಿಲೋಕ್ ಚಂದ್ರ ಮಾಹಿತಿ ನೀಡಿದ್ದಾರೆ.