

ನವದೆಹಲಿ: ದೇಶಾದ್ಯಂತ ಈ ವರ್ಷ ಪ್ರವಾಸಿಗರು ಬುಕ್ ಮಾಡಿದ ತಾಣಗಳಲ್ಲಿ ಹೈದರಾಬಾದ್ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರು, ದೆಹಲಿ, ಕೋಲ್ಕತ ನಂತರದ ಸ್ಥಾನಗಳಲ್ಲಿವೆ ಎಂದು ಓಯೋ ಕಂಪನಿ ಮಂಗಳವಾರ ಬಿಡುಗಡೆ ಮಾಡಿರುವ ‘ಟ್ರಾವೆಲೋಪೀಡಿಯಾ 2024’ ವರದಿ ತಿಳಿಸಿದೆ.
ಇಡೀ ವರ್ಷದಲ್ಲಿ ಜನರು ಮಾಡಿರುವ ಬುಕಿಂಗ್ನ ಮಾಹಿತಿ ಆಧರಿಸಿ ಈ ವರದಿ ತಯಾರಿಸಲಾಗಿದೆ. ‘ಜನರು ಆಧ್ಯಾತ್ಮಿಕ ಕೇಂದ್ರಗಳಿಗೇ ಹೆಚ್ಚು ಬುಕಿಂಗ್ ಮಾಡಿರುವುದು ವಿಶೇಷ. ಈ ಪೈಕಿ ಪುರಿ, ವಾರಾಣಸಿ ಮತ್ತು ಹರಿದ್ವಾರ ಮೊದಲ ಮೂರು ಸ್ಥಾನಗಳಲ್ಲಿವೆ. ದೇವಗಢ, ಪಳನಿ, ಗೋವರ್ಧನಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಿದೆ.
ಸಣ್ಣ ನಗರಗಳ ಪೈಕಿ ಪಟನಾ, ರಾಜಮಂಡ್ರಿ, ಹುಬ್ಬಳ್ಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದ್ದು, ಕಳೆದ ವರ್ಷಕ್ಕಿಂತ ಶೇ. 49ರಷ್ಟು ಬುಕಿಂಗ್ ಹೆಚ್ಚಾಗಿರುವುದು ವಿಶೇಷ. ರಾಜ್ಯಗಳ ಪೈಕಿ ಉತ್ತರಪ್ರದೇಶ ತನ್ನ ಜನಪ್ರಿಯತೆಯನ್ನು ಈಗಲೂ ಉಳಿಸಿಕೊಂಡಿದೆ.
ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಇವೆ. ವಿರಾಮ ಪ್ರಯಾಣದ ತಾಣಗಳ ಪೈಕಿ ಜೈಪುರ ಮೊದಲ ಸ್ಥಾನದಲ್ಲಿದೆ. ಗೋವಾ, ಪಾಂಡಿಚೆರಿ, ಮೈಸೂರು ನಂತರದಲ್ಲಿವೆ. ಅಚ್ಚರಿಯೆಂಬಂತೆ, ಮುಂಬೈಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಓಯೋ ಹಿರಿಯ ಅಧಿಕಾರಿ ಶ್ರೀರಂಗ ಗೋಡ್ಬೋಲೆ ತಿಳಿಸಿದ್ದಾರೆ.