

ಪಾಂಡವಪುರ: ನಾಡಪ್ರಭು ಕೆಂಪೇಗೌಡ ಸಾಕಷ್ಟು ಕಲ್ಪನೆಗಳನ್ನು ಇಟ್ಟುಕೊಂಡು ನಿರ್ಮಾಣ ಮಾಡಿದಂತಹ ಬೆಂಗಳೂರು ನಗರ ಇಂದು ವಿಶ್ವದಲ್ಲಿಯೇ ಜನಮನ್ನಣೆ ಪಡೆದ ನಗರವಾಗಿ ಹೊರಹೊಮ್ಮಿದೆ ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿ ಆಡಳಿತ ನಡೆದ ಕೆಂಪೇಗೌಡರ ವಂಶಸ್ಥರ ಆಳ್ವಿಕೆಯ ಕಾಲ ಸುವರ್ಣ ಯುಗವಾಗಿತ್ತು. ಸಾಕಷ್ಟು ಮೌಲ್ಯಗಳನ್ನು ಇಟ್ಟುಕೊಂಡು ನಾಡು ಕಟ್ಟುವ ಕೆಲಸ ಮಾಡಿದರು ಎಂದರು.
ಬೆಂಗಳೂರು ನಗರ ನಿರ್ಮಾಣ ಮಾಡುವ ಜತೆಗೆ ಕೆರೆ-ಕಟ್ಟೆಗಳು, ದೇವಾಲಯಗಳನ್ನು ನಿರ್ಮಾಣ ಮಾಡಿದರು. ಪಟ್ಟಣದಲ್ಲಿ ಎಲ್ಲ ಕರಕುಶಲ ಸಮುದಾಯಗಳಿಗೆ ಒಂದೊಂದು ಪಟ್ಟಣ ನಿರ್ಮಾಣ ಮಾಡಿ ವ್ಯಾಪಾರ-ವಹಿವಾಟು ನಡೆಸಲು ಮಾರುಕಟ್ಟೆಗಳ ಅನುಕೂಲ ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು.
ಉಪನ್ಯಾಸಕ ಡಾ.ಚಂದ್ರಶೇಖರ್ ಮಾತನಾಡಿ, ಅಲೆಮಾರಿ ಜನಾಂಗದ ನಾಯಕರಾಗಿದ್ದ ಕೆಂಪೇಗೌಡರು ತದನಂತರ ವಿಜಯನಗರ ಅರಸರ ಆಕರ್ಷಣೆಯ ಮೂಲಕ ಪ್ರಭುತ್ವ ಸಾಧಿಸಿದರು. 12 ಹೋಬಳಿಗಳನ್ನು ಸೇರಿಸಿ ಬೆಂಗಳೂರು ಎಂಬ ನಗರವನ್ನು ನಿರ್ಮಾಣ ಮಾಡಿದರು. ಕೆಂಪೇಗೌಡರು ಕೆರೆ-ಕಟ್ಟೆಗಳನ್ನು ನಿರ್ಮಿಸಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರು. ನೀರಾವರಿ ವ್ಯವಸ್ಥೆಯನ್ನು ಸಹ ಅನುಕೂಲ ಮಾಡಿಕೊಟ್ಟರು ಎಂದರು.
ತಹಶೀಲ್ದಾರ್ ಸಂತೋಷ್‌ಕುಮಾರ್, ಇಒ ವೀಣಾ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರಾಗಿದ್ದರು.
ಸಮಾರಂಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಯೋಗೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಆರ್.ರಮೇಶ್, ಯುವ ಘಟಕದ ಅಧ್ಯಕ್ಷ ದೀಪು, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಎಚ್.ಎನ್.ಮಂಜುನಾಥ್, ರಾಘವ, ಮಂಡಿಬೆಟ್ಟಹಳ್ಳಿ ಮಂಜುನಾಥ್, ಡಿ.ಹುಚ್ಚೇಗೌಡ, ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಕಣಿವೆ ರಾಮು, ಅಂಕಯ್ಯ, ಧನ್ಯಕುಮಾರ್ ಸೇರಿದಂತೆ ಸಮುದಾಯದ ಹಲವು ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.