

ಬೆಂಗಳೂರು: ರಾಜಧಾನಿ ಮತ್ತು ಹೊರವಲಯದಲ್ಲಿ ಹೆಚ್ಚಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ವಾಸವಾಗಿರುವುದು ಪೊಲೀಸರ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮೆಹದಿ ಫೌಂಡೇಷನ್ ಇಂಟರ್‌ನ್ಯಾಷನಲ್ ಎನ್‌ಜಿಒ ಸಹಾಯದಿಂದ ಗೋಹರ್ ಸಾಹಿ ಹೆಸರಿನ ಮುಸ್ಲಿಂ ಧರ್ಮಗುರುವಿನ ಪ್ರಚಾರಕ್ಕಾಗಿ ಪಾಕಿಸ್ತಾನದ ಕರಾಚಿಯಿಂದ ಕುಟುಂಬಸ್ಥರಾಗಿ ಅಕ್ರಮವಾಗಿ ಬಂದು ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಈ ಬಗ್ಗೆ ಜಿಗಣಿ ಪೊಲೀಸರು ಮಾಹಿತಿ ಕಲೆ ಹಾಕಿ 17ಕ್ಕೂ ಅಧಿಕ ಪಾಕ್ ಮತ್ತು ಬಾಂಗ್ಲಾ ಪ್ರಜೆಗಳನ್ನು ಪತ್ತೆಹಚ್ಚಿದ್ದರು.
ಇದೇ ರೀತಿ ಪಾಕಿಸ್ತಾನದಿಂದ ಬಾಂಗ್ಲಾದೇಶ ಅಥವಾ ನೇಪಾಳಕ್ಕೆ ಬಂದು ಅಲ್ಲಿಂದ ಭಾರತಕ್ಕೆ ನುಸುಳುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಕೆಲಕಾಲ ಅಡಗಿ, ನಂತರ ಭಾರತದಲ್ಲಿ ಉಳಿಯಲು ಬೇಕಾದ ಆಧಾರ್, ಮತದಾನ ಗುರುತಿನ ಪತ್ರ, ಪಾಸ್‌ಪೋರ್ಟ್‌ಗಳನ್ನು ನಕಲಿ ಮಾಡಿಕೊಂಡು, ಅಲ್ಲಿಂದ ಬೆಂಗಳೂರು ಪ್ರವೇಶ ಮಾಡುತ್ತಿದ್ದಾರೆ. ಬಹುತೇಕರು ಬಾಂಗ್ಲಾ ಪ್ರಜೆಗಳೇ ಹೆಚ್ಚಾಗಿದ್ದು, ಇವರು ಚಿಂದಿ ಆಯುವ ಸೋಗಿನಲ್ಲಿ ಎಲ್ಲೆಡೆ ಸುತ್ತಾಡಿಕೊಂಡು ಸಣ್ಣಪುಟ್ಟ ಕೂಲಿ ಕೆಲಸಕ್ಕೆ ಸೇರಿ ಜೀವನ ಕಟ್ಟಿಕೊಳ್ಳುತ್ತಾರೆ. ನಂತರ ಬಾಡಿಗೆ ಮನೆ ಪಡೆದು ಇಲ್ಲಿಯೇ ಬಿಡಾರ ಹೂಡುತ್ತಿದ್ದಾರೆ. ಅದೇ ರೀತಿಯಾಗಿ ಪಾಕ್ ಪ್ರಜೆಗಳು ಸಹ ತೊಡಗಿಕೊಂಡಿದ್ದಾರೆ.
ಅಕ್ರಮ ನುಸುಳುಕೋರರಲ್ಲಿ ಕೆಲವರು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿಕೊಂಡು ಭಾರತದಲ್ಲಿ ಉಗ್ರರ ಬೇರು ಹೆಚ್ಚಿಸಲು ಕೆಲಸ ಮಾಡುತ್ತಾರೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದೆ.
ಇದೇ ಕೇವಲ ಪಾಕ್ ಮತ್ತು ಬಾಂಗ್ಲಾ ಪ್ರಜೆಗಳಿಗೆ ಸೀಮಿತವಾಗಿಲ್ಲ. ಇನ್ನೂ ಆಫ್ರಿಕಾ, ನೈಜೀರಿಯಾ ಪ್ರಜೆಗಳು ಶಿಕ್ಷಣ, ನೌಕರಿ, ಪ್ರವಾಸ, ಉದ್ಯಮದ ನೆಪದಲ್ಲಿ ವೀಸಾ ಪಡೆದು ಭಾರತಕ್ಕೆ ಬರುತ್ತಿದ್ದಾರೆ. ಕೊನೆಗೆ ವೀಸಾ ಮುಗಿದರು ವಾಪಸ್ ಹೋಗದೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಅಕ್ರಮ ನಿವಾಸಿಗಳನ್ನು ಪತ್ತೆಹಚ್ಚುವುದೇ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಪೊಲೀಸ್ ಇಲಾಖೆಯಲ್ಲಿ ಲಭ್ಯ ಇರುವ ಅಂಕಿಅಂಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ನಿವಾಸಿಗಳು ಇರುವುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.
ವಿಶೇಷ ಕಾರ್ಯಪಡೆ
ಅಕ್ರಮ ವಲಸಿಗರ ಪತ್ತೆಯಾಗಿ ಸಿಲಿಕಾನ್ ಸಿಟಿಯಲ್ಲಿ ವಿಶೇಷ ಘಟಕ ತೆರೆಯಲಾಗಿದೆ. ನಗರ ಪ್ರವೇಶಿಸುವ ವಿದೇಶಿಯರ ಬಗ್ಗೆ ಎ್ಆರ್‌ಆರ್‌ಒ ಮೂಲಕ ಮಾಹಿತಿಯನ್ನು ಪಡೆದು ಪ್ರತಿ ವಿಭಾಗಿಯ ಡಿಸಿಪಿಗಳ ಮುಖಾಂತರ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಆಯಾ ಪೊಲೀಸ್ ಠಾಣೆಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಸಿಸಿಬಿಯ ಸಂಘಟಿತ ಅಪರಾಧ ದಳ ಕೂಡ ಖಚಿತ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಅಕ್ರಮ ನುಸುಳುಕೋರರ ಪತ್ತೆಹಚ್ಚಿ ಗಡಿಪಾರು ಮಾಡಲಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ನೆಲೆಸಿದ್ದ 115 ಬಾಂಗ್ಲಾ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ.
ರಾಜ್ಯದಲ್ಲಿ ಅಕ್ರಮ ನುಸುಳುಕೋರರು
----------------------------------
ಜಿಲ್ಲೆ/ ನಗರ ಪಾಕಿಸ್ತಾನ ಬಾಂಗ್ಲಾದೇಶ
---------------------------------
ಬೆಂಗಳೂರು ನಗರ - 93
ಬೆಂ.ಗ್ರಾಮಾಂತರ 24 29
ಮೈಸೂರು ನಗರ - 1
ಮಂಗಳೂರು ನಗರ - 1
ವಿಜಯಪುರ - 1
ಚಿತ್ರದುರ್ಗ - 6
ಕೊಡಗು - 1
ಶಿವಮೊಗ್ಗ - 12
ಹಾಸನ - 3
ಉಡುಪಿ - 10
ಧಾರವಾಡ - 2
------------------------------
ಒಟ್ಟು 24 159