ಬೆಂಗಳೂರಿನ ಐಐಎಸ್​ಸಿ ಟಾಪ್ ವಿವಿ; ದಕ್ಷಿಣ ಏಷ್ಯಾದಲ್ಲೇ ವೇಗವಾಗಿ ಬೆಳೆಯುತ್ತಿರುವ ಶಿಕ್ಷಣ ಸಂಸ್ಥೆ

IISC
Published on

ನವದೆಹಲಿ: ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್​ಸಿ ) ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ (ಕ್ಯುಎಸ್​ಡಬ್ಲ್ಯು ಯುಆರ್) ನಡೆಸಿದ ಜಾಗತಿಕ ರ‍್ಯಾಂಕಿಂಗ್ ಪಟ್ಟಿಯಲ್ಲಿ 155ನೇ ಸ್ಥಾನ ಗಳಿಸುವ ಮೂಲಕ ಭಾರತದ ಟಾಪ್ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಐಟಿಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿರುವ ಐಐಎಸ್​ಸಿ, 31 ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ.

ಐಐಟಿ -ಬಾಂಬೆ (ಐಐಟಿ-ಬಿ), ಐಐಟಿ -ದಿಲ್ಲಿ (ಐಐಟಿ-ಡಿ) ಕ್ರಮವಾಗಿ 172 ಮತ್ತು 174ನೇ ಸ್ಥಾನ ಗಳಿಸಿವೆ. ಜಾಗತಿಕ ಟಾಪ್ 200 ಪಟ್ಟಿಯಲ್ಲಿ ಇವೆರಡು ಐಐಟಿಗಳು ಮತ್ತು ಐಐಎಸ್​ಸಿ ಮಾತ್ರ ಸ್ಥಾನ ಪಡೆದಿವೆ. 2017ರಿಂದೀಚೆಗೆ ಜಾಗತಿಕ ಟಾಪ್ 1,000 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಶಿಕ್ಷಣ ಸಂಸ್ಥೆಗಳ ಸಂಖ್ಯೆ 22ರಿಂದ 27ಕ್ಕೆ ಏರಿಕೆ ಆಗಿದೆ. ‘ರ್ಯಾಂಕಿಂಗ್ ಸಿದ್ಧಪಡಿಸಲು ಒಟ್ಟು 8 ಮಾನದಂಡಗಳನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲಿ ನಾಲ್ಕು ಮಾನದಂಡಗಳನ್ನು ಐಐಎಸ್​ಸಿ ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಪ್ರಮುಖ 8 ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ’ ಎಂದು ಕ್ಯುಎಸ್ ವಕ್ತಾರ ವಿಲಿಯಮ್ ಬಾರ್ಬಿಯೆರಿ ತಿಳಿಸಿದ್ದಾರೆ.

1000 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಐಐಟಿಗಳು: ಐಐಟಿ ಮದ್ರಾಸ್ (250), ಐಐಟಿ ಕಾನ್ಪುರ (264), ಐಐಟಿ ಖರಗ್​ಪುರ (270), ಐಐಟಿ ರೂರ್ಕಿ (369), ಐಐಟಿ ಗುವಾಹಟಿ (384), ಐಐಟಿ ಇಂದೋರ್ (396) ಸ್ಥಾನ ಪಡೆದಿವೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮತ್ತು ಬಿರ್ಲಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್ ಒಂದೇ ಶ್ರೇಣಿಯನ್ನು ಕಾಯ್ದುಕೊಂಡಿವೆ.

ಟಾಪ್ 10 ವಿವಿಗಳು

ಟಾಪ್ ರ‌್ಯಾಂಕರ್​​ಗಳು: ಮ್ಯಾಸಚೂಸೆಟ್ಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, (ಅಮೆರಿಕ) ಪ್ರಥಮ ರ‌್ಯಾಂಕ್, ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್ , ಬ್ರಿಟನ್( 2), ಸ್ಟಾ್ಯನ್​ಫೋರ್ಡ್ ಯೂನಿವರ್ಸಿಟಿ, ಅಮೆರಿಕ (3), ಯೂನಿವರ್ಸಿಟಿ ಆಫ್ ಆಕ್ಸ್​ಫಡ್ ರ್ ಬ್ರಿಟನ್ (4), ಹಾರ್ವಡ್ ರ್ ಯೂನಿವರ್ಸಿಟಿ, ಅಮೆರಿಕ (5), ಕ್ಯಾಲಿಫೋರ್ನಿಯಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಅಮೆರಿಕ (6), ಇಂಪೀರಿಯಲ್ ಕಾಲೇಜ್ ಲಂಡನ್, ಯುಕೆ (7), ಯುಸಿಎಲ್, ಯುಕೆ (8), ಇಟಿಎಚ್ ಜೂರಿಚ್ , ಸ್ವಿಟ್ಜರ್​ಲೆಂಡ್ (9), ಯೂನಿವರ್ಸಿಟಿ ಆಫ್ ಷಿಕಾಗೊ (ಅಮೆರಿಕ)10 ಸ್ಥಾನ ಪಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net