ಐಟಿ-ಬಿಟಿಯಲ್ಲಿ ಬೆಂಗಳೂರೇ ಫಸ್ಟ್! ಹೇಗೆ ಅಂತೀರಾ? ಈ ವರದಿ ನೋಡಿ...

Untitled design (4)
Published on

ಬೆಂಗಳೂರು: ದೇಶದ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ಮಹಾನಗರವು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಮೂರು ದಶಕಗಳ ಹಿಂದೆಯೇ ಐಟಿ ವಲಯವನ್ನು ಮೊದಲ ಬಾರಿಗೆ ರಾಷ್ಟ್ರಕ್ಕೆ ಖ್ಯಾತಿ ತಂದುಕೊಟ್ಟಿರುವ ಬೆಂಗಳೂರು ಈಗಲೂ ತನ್ನ ಸ್ಥಾನವನ್ನು ಇತರ ನಗರ, ರಾಜ್ಯಗಳಿಗೆ ಬಿಟ್ಟುಕೊಟ್ಟಿಲ್ಲ. ಅಷ್ಟರಮಟ್ಟಿಗೆ ಈ ಕ್ಷೇತ್ರದ ಮೇಲೆ ಅಧಿಪತ್ಯ ಸಾಧಿಸಿದ್ದು, ಹೊಸ ತಂತ್ರಜ್ಞಾನ, ಆವಿಷ್ಕಾರ, ಸಂಶೋಧನೆ ಸೇರಿ ವಿಜ್ಞಾನದ ಎಲ್ಲ ವಿಭಾಗಗಳಲ್ಲಿ ಸಾಧನೆ ಮಾಡುತ್ತ ಮೇಲೇರುತ್ತಲೇ ಇದೆ.

ಬೆಂಗಳೂರಿನಲ್ಲಿ ಜಾಗತಿಕ ಕಂಪನಿಗಳ ಪ್ರಮುಖ ಕಚೇರಿ, ಕಾರ್ಪೆರೇಟ್ ಕಚೇರಿ, ಪ್ರಯೋಗಾಲಯ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳಿವೆ. ವಿಶ್ವದ ಅಗ್ರ ರಾಷ್ಟ್ರಗಳ ಪ್ರಮುಖರು ದಿಲ್ಲಿಗೆ ಬರುವ ಬದಲು ಬೆಂಗಳೂರಿಗೆ ಆಗಮಿಸಿ ಇಲ್ಲಿನ ಟೆಕ್ ಕಂಪನಿಗಳ ಜತೆ ವ್ಯಾಪಾರ ಸಂಬಂಧವನ್ನು ವೃದ್ಧಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಇಲ್ಲಿ ಸಿಗುವ ಗುಣಮಟ್ಟದ ಮಾನವ ಸಂಪನ್ಮೂಲ, ನುರಿತ ತಂತ್ರಜ್ಞರು, ಅಗಾಧ ಪ್ರತಿಭೆ, ಉದ್ದಿಮೆಸ್ನೇಹಿ ವಾತಾವರಣ, ಮೂಲಸೌಕರ್ಯ ಇತ್ಯಾದಿ ಅಂಶಗಳು. ದೇಶದ ಒಟ್ಟು ಐಟಿ ರಫ್ತಿನಲ್ಲಿ ಕರ್ನಾಟಕದಿಂದ ಹೆಚ್ಚಾಗಿ ಬೆಂಗಳೂರಿನಿಂದ ಶೇ. 38-40 ಕೊಡುಗೆ (ವಾರ್ಷಿಕ 80 ಶತಕೋಟಿ ರೂ.ಗೂ ಅಧಿಕ) ನೀಡುತ್ತಿದ್ದು, ಸಾಫ್ಟ್​ವೇರ್ ರಫ್ತಿನಲ್ಲಿ ಕರ್ನಾಟಕವು ಎಲ್ಲ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ.

ಕಂಪನಿಗಳ ಸಂಖ್ಯೆ ಹೆಚ್ಚಳ

ಬೆಂಗಳೂರಿನಲ್ಲಿ 12 ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳಿವೆ. ಇದು ಭಾರತದ ಯಾವುದೇ ನಗರಕ್ಕಿಂತ ಹೆಚ್ಚಿನದು. ಇನ್ಪೋಸಿಸ್, ವಿಪ್ರೋ, ಟಿಸಿಎಸ್, ಐಬಿಎಂ, ಆಕ್ಸೆಂಚರ್, ಸಿಸ್ಕೊ, ಇಂಟೆಲ್, ಮೈಕ್ರೋ ಸಾಫ್ಟ್, ಗೂಗಲ್, ಅಮೆಜಾನ್ ಮತ್ತು ಇತರ ಜಾಗತಿಕ ದೈತ್ಯ ಕಂಪನಿಗಳ ನೆಲೆಯಾಗಿದೆ.

ಬೃಹತ್ ಐಟಿ ಕಾರ್ಯಪಡೆ

1.5 ದಶಲಕ್ಷಕ್ಕಿಂತಲೂ ಹೆಚ್ಚು ಐಟಿ ವೃತ್ತಿಪರರ ಕಾರ್ಯಕ್ಷೇತ್ರ, 34 ದಶಲಕ್ಷ ಪೂರಕ ಕೆಲಸಕ್ಕೆ ತವರು (ಬಿಪಿಒ, ಕೆಪಿಒ, ಸ್ಟಾರ್ಟಪ್), ಭಾರತದ 5 ದಶಲಕ್ಷ ಐಟಿ ಕಾರ್ಯಪಡೆಯಲ್ಲಿ ಶೇ.35 ಉತ್ಪಾದನೆ ಪಾಲು

ವಿಶ್ವ ದರ್ಜೆಯ ಐಟಿ ಪಾರ್ಕ್

  • ಎಲೆಕ್ಟ್ರಾನಿಕ್ ಸಿಟಿ- ಭಾರತದ ಮೊದಲ ಮತ್ತು ಅತಿದೊಡ್ಡ ಐಟಿ ಪಾರ್ಕ್ (ಸ್ಥಾಪನೆ 1978)
  • ಮಾನ್ಯತಾ ಎಂಬಸಿ ಬಿಸಿನೆಸ್ ಪಾರ್ಕ್, ವೈಟ್​ಫೀಲ್ಡ್, ಬಾಗ್ಮನೆ ಟೆಕ್ ಪಾರ್ಕ್​ಗಳು ಬೃಹತ್ ಟೆಕ್ ಕ್ಯಾಂಪಸ್​ಗಳು.
  • ಇಂಟರ್​ನ್ಯಾಷನಲ್ ಟೆಕ್ ಪಾರ್ಕ್ ಬೆಂಗಳೂರು (ಐಟಿಪಿಬಿ) ಏಷ್ಯಾದ ಮೊದಲ ಸಂಯೋಜಿತ ಟೆಕ್ ಪಾರ್ಕ್​ಗಳಲ್ಲಿ ಒಂದು. ನವೋದ್ಯಮ, ನಾವೀನ್ಯತೆಯ ಪರಿಸರ ವ್ಯವಸ್ಥೆ

1. ಭಾರತದ ನವೋದ್ಯಮ ಬಂಡವಾಳ: 15,000ಕ್ಕೂ ಹೆಚ್ಚು ನವೋದ್ಯಮಿಗಳು (ದೇಶದಲ್ಲಿ ಹೆಚ್ಚು) 2. 50+ ಯುನಿಕಾರ್ನ್​ಗಳು (ಫ್ಲಿಪ್​ಕಾರ್ಟ್, ಸ್ವಿಗ್ಗಿ, ಜೆರೋಧಾ ಇತ್ಯಾದಿ) ಇಲ್ಲಿ ಪ್ರಧಾನ ಕಚೇರಿ ಹೊಂದಿವೆ.

ಟಾಪ್ ಇಂಜಿನಿಯರಿಂಗ್ ಪ್ರತಿಭಾನ್ವಿತರ ಕಣಜ

  • ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) - ಭಾರತದ ಅಗ್ರ ಸಂಶೋಧನಾ ಸಂಸ್ಥೆ ಎನಿಸಿದೆ.
  • 100+ ಇಂಜಿನಿಯರಿಂಗ್ ಕಾಲೇಜುಗಳು ವಾರ್ಷಿಕ 1 ಲಕ್ಷ ಇಂಜಿನಿಯರ್ ಪದವೀಧರರನ್ನು ಹೊರತರುತ್ತಿವೆ.

ಸರ್ಕಾರದ ಬೆಂಬಲ

  • ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಐಟಿ ನೀತಿ ಪ್ರಕಟಿಸಿದ ಮೊದಲ ರಾಜ್ಯ (1997).
  • ಎಸ್​ಟಿಪಿಐ (ಭಾರತದ ಸಾಫ್ಟ್​ವೇರ್ ತಂತ್ರಜ್ಞಾನ ಪಾರ್ಕ್) ಬೆಂಗಳೂರಿನಲ್ಲಿ ಆರಂಭಿಕ ಕೇಂದ್ರ ಸ್ಥಾಪನೆ.
  • ಟೆಕ್ ಪಾರ್ಕ್​ಗಳಿಗೆ ತೆರಿಗೆ ಪೋ›ತ್ಸಾಹ, ಭೂ ಹಂಚಿಕೆ ಮತ್ತು ನಿರಂತರ ವಿದ್ಯುತ್ ಪೂರೈಕೆ.

ಜಾಗತಿಕ ಆರ್ ಆಂಡ್ ಡಿ ಕೇಂದ್ರಗಳು

  • 400ಕ್ಕೂ ಅಧಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ (ಏಷ್ಯಾದಲ್ಲೇ ಅತಿ ಹೆಚ್ಚು)
  • ಜಿಇ, ಬೋಯಿಂಗ್, ಗೋಲ್ಡ್​ಮನ್ ಸ್ಯಾಕ್ಸ್, ಟೆಕ್ಸಾಸ್ ಇನ್​ಸ್ಟ್ರುಮೆಂಟ್ಸ್​ನಂತಹ ಕಂಪನಿಗಳು ತಮ್ಮ ಅತಿದೊಡ್ಡ ಆರ್ ಆಂಡ್ ಡಿ ಕೇಂದ್ರ/ಲ್ಯಾಬ್ ಹೊಂದಿವೆ.

ವಾಸಯೋಗ್ಯ ತಂತ್ರಜ್ಞಾನ ಸಂಸ್ಕೃತಿ

  • ಆಹ್ಲಾದಕರ ಹವಾಮಾನ, ಇಂಗ್ಲಿಷ್ ಭಾಷೆ ಮಾತನಾಡುವ ಟೆಕ್ ಪಡೆ, ಜಾಗತಿಕ ಜೀವನಶೈಲಿ.
  • ಭಾರತ ಮತ್ತು ವಿದೇಶಗಳಿಂದ ಪ್ರತಿಭೆಗಳನ್ನು ಆಕರ್ಷಿಸುವ ಆಯಸ್ಕಾಂತಿಯ ಗುಣದಿಂದಾಗಿ ಬೆಂಗಳೂರಿಗೆ ಕೋಡು ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net