ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನೆ ಇಲ್ಲ! ಹೊಸಕೆರೆಹಳ್ಳಿ ಬಳಿ ಕ್ವಾಟ್ರಸ್ ನಿರ್ಮಾಣಕ್ಕೆ ಯೋಜನೆ

Published on

ಬೆಂಗಳೂರು:

ರಾಜಧಾನಿ ಬೆಂಗಳೂರು ನಗರದ ಜಿಲ್ಲಾಧಿಕಾರಿಗಳಿಗೆ, ಅಧಿಕೃತವಾದ ನಿವಾಸ ಇನ್ನೂ ಗಗನ ಕುಸುಮವಾಗಿದೆ. ಈ ನಿಟ್ಟಿನಲ್ಲಿ ಹಲವಾರು ಬಾರಿ ಪ್ರಯತ್ನಗಳು ನಡೆದರೂ ಅದು ಇನ್ನೂ ಕೈಗೂಡಿಲ್ಲ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿಗಳಿಗೆ ಅಧಿಕೃತವಾದ ಮನೆಗಳಿವೆ. ಇತ್ತೀಚೆಗೆ ರಚನೆಯಾದ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿ ಮನೆ ನಿರ್ಮಾಣವಾಗಿದೆ. ಚಿಕ್ಕಮಗಳೂರು, ಹಾಸನ ಸೇರಿದಮತೆ ಹಲವು ಜಿಲ್ಲೆಯಲ್ಲಿ ಬ್ರಿಟೀಷ್ ಕಾಲದ ಬಂಗ್ಲೋ ಇವೆ. ಇಂದಿಗೂ ಜಿಲ್ಲಾಧಿಕಾರಿಗಳು ಆ ಬಂಗ್ಲೋಗಳನ್ನೆ ತಮ್ಮ ನಿವಾಸಗಳನ್ನಾಗಿ ಮಾಡಿಕೊಂಡಿದ್ದಾರೆ.

ಅಚ್ಚರಿ ಅಂದರೆ, ಇಡೀ ರಾಜ್ಯದ ಉತ್ಪತ್ತಿಯಲ್ಲಿ ಅರ್ಧದಷ್ಟು ತೆರಿಗೆ ಬೆಂಗಳೂರಿನಲ್ಲಿಯೇ ಸಂಗ್ರಹವಾಗುತ್ತದೆ. ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಲೇ ಬಂದಿರುವ ಬೆಂಗಳೂರಿನ ಜಿಲ್ಲಾಧಿಕಾರಿಗಳಿಗೆ ನಿವಾಸ ನಿರ್ಮಾಣ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿಯುತ್ತಲೇ ಬಂದಿದೆ.

ಈ ಬಾರಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನೆ ನಿರ್ಮಾಣ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸಕಾರ ಪ್ರಯತ್ನ ನಡೆಸಿದೆ. ಅದಕ್ಕಾಗಿ ನಾಯಂಡನಹಳ್ಳಿ ಸರ್ಕಲ್‌ಗೆ ಹತ್ತಿರದಲ್ಲಿರುವ ಹೊಸಕೆರೆಹಳ್ಳಿ ಬಳಿ (ಪಿಇಎಸ್ ಕಾಲೇಜು ಎದುರು) ಜಾಗವನ್ನು ಗುರುತಿಸಿದೆ. ಈ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಅಷ್ಟೇ ಅಲ್ಲ, ಪ್ರಾದೇಶಿಕ ಆಯುಕ್ತರಿಗೂ (ಆರ್‌ಸಿ) ಅವರಿಗೂ ಮನೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

*ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನೆ (ಕ್ವಾಟ್ರಸ್) ಇಲ್ಲದೆ ಇರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಹಿಂದೆ ಯಾಕೆ ಕ್ವಾಟ್ರಸ್ ಮಾಡಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಈಗ ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.

-ಜಗದೀಶ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net