

ಬೆಂಗಳೂರು: ಕರೊನಾ ಸೋಂಕಿಗೆ ಹೆದರಿ ತರಾತುರಿಯಲ್ಲಿ ಬೆಂಗಳೂರು ತೊರೆದು ಊರು ಸೇರಿರುವ ಜನರಿಗೆ ಈಗ ಮನೆಗಳ್ಳರ ಭಯ ಶುರುವಾಗಿದೆ!
ಮಾರ್ಚ್ 2ನೇ ವಾರವೇ ಶಾಲಾ-ಕಾಲೇಜು ರಜೆ ಮತ್ತು ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಣೆ ಆಗುತ್ತಿದಂತೆ ಸಾಕಷ್ಟು ಜನರು ನಗರ, ಪಟ್ಟಣ ತೊರೆದು ತಮ್ಮ ಊರುಗಳಿಗೆ ತೆರಳಿದ್ದರು. ಕೆಲವರು ಸಂಬಂಧಿಕರ ಮನೆಗೆ ಹೋಗಿದ್ದರು. ಆದರೆ, ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ಸಾರಿಗೆ ಸಂಪೂರ್ಣ ಬಂದ್ ಮಾಡಿದ ಪರಿಣಾಮ ಜನರು ಅಲ್ಲೇ ಉಳಿಯಬೇಕಾಗಿದೆ. ಈಗ ಮನೆಗೆ ವಾಪಸಾಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಬೀಗ ಹಾಕಿ ಹೋಗಿರುವ ಮನೆಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ದಿನಪತ್ರಿಕೆ, ಕೊರಿಯರ್ ಬಿದ್ದಿರುವ, ಕಸ ಗುಡಿಸಿ ರಂಗೋಲಿ ಬಿಡಿಸದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಜನರ ಸಂಚಾರ ಸಹ ವಿರಳವಾಗಿದೆ. ಮನೆಯಲ್ಲಿಯೇ ಜನರು ಉಳಿಯುವ ಕಾರಣ ಬೇಗನೇ ನಿದ್ದೆಗೆ ಜಾರುತ್ತಿದ್ದಾರೆ. ಬಹುತೇಕ ರಸ್ತೆಗಳಿಗೆ ಬ್ಯಾರಿಕೇಡ್, ಮರಗಳನ್ನು ಕಟ್ಟಿ ಪೊಲೀಸರು ಬಂದ್ ಮಾಡಿ ಮುಖ್ಯರಸ್ತೆಗಳಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಗಲ್ಲಿಗಳನ್ನು ಸುತ್ತುತ್ತಿದ್ದ ಹೊಯ್ಸಳ, ಚೀತಾ ವಾಹನ ಗಸ್ತು ಇಲ್ಲದಂತಾಗಿದೆ.
ಬೀಟ್ ಸಿಬ್ಬಂದಿ ಸಂಪೂರ್ಣ ಲಾಕ್ಡೌನ್ನಲ್ಲಿ ಮಗ್ನರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ರಾತ್ರಿ ವೇಳೆ ಬೀಗ ಹೊಡೆದು ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದಾರೆ.
ಅಕ್ಕಪಕ್ಕದ ಮನೆಯವರು ಕಳ್ಳತನ ಕೃತ್ಯ ಗಮನಿಸಿ ಹೇಳುವವರೆಗೂ ಮಾಲೀಕರಿಗೆ ಕಳ್ಳತನದ ಮಾಹಿತಿ ಗೊತ್ತಾಗುವುದಿಲ್ಲ. ಇದು ತಿಳಿಯುವ ವೇಳೆಗೆ ಮೂರ್ನಾಲ್ಕು ದಿನಗಳೇ ಕಳೆದು ಹೋಗುತ್ತಿದೆ. ಗೊತ್ತಾದರೂ ಮನೆಗೆ ಬಂದು ಪರಿಶೀಲನೆ ನಡೆಸಿ ಸ್ಥಳೀಯ ಠಾಣೆಗೆ ದೂರು ಕೊಡಲು ಕಷ್ಟ ಸಾಧ್ಯವಾಗಿದೆ. ಪೊಲೀಸರು ಈ ಬಗ್ಗೆ ನಿಗಾ ವಹಿಸುವಂತೆ ಜನರು ಮನವಿ ಮಾಡುತ್ತಿದ್ದಾರೆ.
ರಾತ್ರಿ ಗಸ್ತು ಹೆಚ್ಚಾಗಲಿ: ಲಾಕ್ಡೌನ್ ಮಾಡುವಲ್ಲಿ ಮತ್ತು ವಾಹನ ತಪಾಸಣೆಯಲ್ಲಿ ನಿರತರಾಗಿರುವ ಪೊಲೀಸರು, ಗಸ್ತನ್ನೂ ಎಂದಿನಂತೆ ನಡೆಸಬೇಕಾಗಿದೆ. ಇಲ್ಲವಾದರೆ, ಕಳ್ಳರಿಗೆ ಮನೆ ಬೀಗ ಒಡೆಯಲು ಅನುಕೂಲವಾಗಲಿದೆ. ಹೊಯ್ಸಳ ರಾತ್ರಿ ಗಸ್ತು ಹೆಚ್ಚಾಗಬೇಕೆಂದು ಜನರ ಒತ್ತಾಯವಾಗಿದೆ.
140 ಗ್ರಾಂ ಚಿನ್ನಾಭರಣ ದೋಚಿದ ಕಳ್ಳರು
ಶಂಕರಪುರದ ಬಿ.ಟಿ. ರಸ್ತೆಯ ಪ್ರಶಾಂತ್ ಎಂಬುವರು ಏ.1ರ ಮಧ್ಯಾಹ್ನ 2.30ರಲ್ಲಿ ಮನೆ ಬೀಗ ಹಾಕಿ ತುಳಸಿ ಕುಂಡದಲ್ಲಿ ಚಾವಿ ಇಟ್ಟು ಮಂಡ್ಯಕ್ಕೆ ಹೋಗಿದ್ದರು. ಏ.5ರ ಬೆಳಗ್ಗೆ ಬಂದು ನೋಡಿದಾಗ ಬೀಗ ತೆಗೆದು 4.20 ಲಕ್ಷ ರೂ. ಮೌಲ್ಯದ 140 ಗ್ರಾಂ. ಆಭರಣ ಕಳವು ಮಾಡಿದ್ದರು. ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಗೆ ಕೂಡಿಟ್ಟಿದ್ದ ಹಣ
ಕುಮಾರಸ್ವಾಮಿ ಲೇಔಟ್ ವಿವೇಕಾನಂದ ಕಾಲನಿಯಲ್ಲಿ ಸಿದ್ದರಾಜು ಎಂಬುವರು ಮಾ. 24ರಂದು ಮನೆಗೆ ಬೀಗ ಹಾಕಿಕೊಂಡು ಹುಟ್ಟೂರು ಕನಕಪುರಕ್ಕೆ ಹೋಗಿದ್ದರು. ಒಳನುಗ್ಗಿರುವ ಕಳ್ಳರು, ಮದುವೆಗೆ ಕೂಡಿಟ್ಟಿದ್ದ 4.5 ಲಕ್ಷ ರೂ. ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. ಏ. 5ಕ್ಕೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಎಚ್ಚರಿಸಿದ ಅಲರಾಂ
ಸಿವಿ ರಾಮನ್ನಗರದ ಭುವನೇಶ್ವರಿನಗರದಲ್ಲಿ ನೆಲೆಸಿದ್ದ ದಂಪತಿ, ತಮಿಳುನಾಡಿಗೆ ಹೋಗಿದ್ದರು. ಏ. 4ರ ರಾತ್ರಿ 2.50ರಲ್ಲಿ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಮತ್ತು ಅಲರಾಂ ಆಫ್ ಆಗಿರುವುದು ಗೊತ್ತಾಗಿದೆ. ಇಂದಿರಾನಗರ 2ನೇ ಹಂತದಲ್ಲಿ ನೆಲೆಸಿದ್ದ ಪುತ್ರಿಗೆ ಮಾಹಿತಿ ನೀಡಿದ್ದರು. ಪುತ್ರಿ ಬಂದು ನೋಡಿದಾಗ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಸಿಸಿ ಕ್ಯಾಮರಾ, ಡಿವಿಆರ್ ಸಮೇತ ಹಲವು ವಸ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವಿಂದರಾಜು ಚಿನ್ನಕುರ್ಚಿ