

ಬನ್ನೂರು : ವಹ್ನೀಪುರ ಎಂದೇ ಪ್ರಖ್ಯಾತವಾಗಿರುವ ಬನ್ನೂರಿನಲ್ಲಿ ಇತಿಹಾಸ ಪ್ರಸಿದ್ದ ವಿಜಯನಗರ ಕಾಲದ ವಿದ್ಯಾರಣ್ಯರಿಂದ ಪೂಜಿಸಲ್ಪಟ್ಟ ಹೇಮಾದ್ರಂಭ ದೇವಿಯ ಜಾತ್ರಾ ಮಹೋತ್ಸವದ ಬಂಡೀ ಉತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಮಾಘ ಶುದ್ಧ ಹುಣ್ಣಿಮೆ ದಿನದಂದು ಆಚರಿಸುವ ಈ ಹಬ್ಬದಲ್ಲಿ ಮುಂಜಾನೆಯೇ ದೇವಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ದೇವಿಯ ದರ್ಶನಕ್ಕೆಂದು ಬಂದ ಸುತ್ತಮುತ್ತಲಿನ ಜನರು ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ದೇವಿಗೆ ಜೈಕಾರದೊಂದಿಗೆ ವೀಳ್ಯದೆಲೆಯನ್ನು ಭಕ್ತರು ಸಮರ್ಪಿಸಿದರು. ರಂಗೋಲಿಯಿಂದ ಸಿಂಗಾರಗೊಂಡಿದ್ದ ಗ್ರಾಮದ ರಸ್ತೆಯಲ್ಲಿ ಜನರು ಹೇಮಾದ್ರಂಭ ದೇವಿಯ ಮೂರ್ತಿಯನ್ನು ಉತ್ಸವದ ಮೂಲಕ ಹೊತ್ತು ಸಾಗುವಾಗ ಮಾರ್ಗದುದ್ದಕ್ಕೂ ಎಳನೀರು ಬಂಡಿಯು ಚಲಿಸುತ್ತ ಜನರಿಗೆ ಒಂದೊಂದು ಎಳನೀರು ವಿತರಿಸಿದ್ದು ವಿಶೇಷವಾಗಿತ್ತು.
ಮೊಳಗಿದ ಜಯಕಾರ: ಕೆಲವು ಭಕ್ತರು ದೇವಿಗೆ ಕಾಸು, ಹೂವು, ಸೂರೆಲೆಗಳನ್ನು ಸಮರ್ಪಿಸಿ ಧನ್ಯತೆ ಮೆರೆದರು. ದಾರಿಯುದ್ದಕ್ಕೂ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.ದೇವಿ ತೋಪಿಗೆ ದೇವಿಯು ಬರುವ ಮುನ್ನವೇ ಕಾವೇರಿ ಮಡುವಿನ ಸಮೀಪದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ದೇವಿಯ ದರ್ಶನವಾಗುತ್ತಿದ್ದಂತೆ ಜೈಕಾರ ಹಾಕಿದರು. ಅಗ್ಗಿಷ್ಟಿಕೆಯನ್ನು ತಾವೇ ತಯಾರಿಸಿದ್ದ ಅನ್ನವನ್ನು ನೇವೇದ್ಯ ಮಾಡಿದರು. ಕಾವೇರಿ ಮಡುವಿನಲ್ಲಿ ದೇವಿಗೆ ಅವಭೃತ ಸ್ನಾನವಾದ ನಂತರ ದೇವಿಯ ತೊಟ್ಟಿಲ ಕೆಳಗೆ ನುಸುಳಲು ಭಕ್ತರು ಸಾಲುಗಟ್ಟಿದ್ದರು. ಪುಣ್ಯಸ್ನಾನದ ನಂತರ ಅನ್ನಸಂತರ್ಪಣೆ ನೆರವೇರಿತು.
ಭಕ್ತ ಜನಸಾಗರ: ಗಂಗರ ಆಳ್ವಿಕೆಯಲ್ಲಿ ಎರಡನೇ ರಾಜಧಾನಿಯಾಗಿತ್ತು ಎನ್ನಲಾದ ಬನ್ನೂರಿನಲ್ಲಿ ರತ್ನಮಹಲ್ ಚಿತ್ರಮಂದಿರದ ಮುಂಭಾಗದ ಆವರಣದಲ್ಲಿ ಆಚರಿಸುವ ಬಂಡೀ ಉತ್ಸವ ಸುತ್ತಮುತ್ತಲಿನ ಗ್ರಾಮದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಬಂಡೀಗಳಿಗೆ ರಾಸುಗಳನ್ನು ಕಟ್ಟಿ ಒಂದಕ್ಕಿಂತ ಒಂದನ್ನು ವೇಗವಾಗಿ ಓಡಿಸಿ ಸಾರ್ವಜನಿಕರ ಗಮನ ಸೆಳೆಯುತ್ತಿದ್ದ ದೃಶ್ಯ ಶನಿವಾರವೂ ವಿಶೇಷವಾಗಿತ್ತು.
ಕೆಲವು ಎತ್ತುಗಳು ನಿಯಂತ್ರಣ ತಪ್ಪಿ ಬ್ಯಾರೀಕೇಡ್ ದಾಟಿಕೊಂಡು ಗಣಪತಿ ದೇವಾಲಯದತ್ತ ನುಗ್ಗಿದವು. ಪೋಲಿಸರು ತುರ್ತು ಕ್ರಮ ವಹಿಸಿ ಯಾವುದೇ ಅಪಾಯವಾಗದಂತೆ ತಡೆದರು. ಪ್ರಮುಖ ಬೀದಿಗಳಲ್ಲಿ ಸಾಗಿದ ದೇವಿಯ ಮೆರವಣಿಗೆ ಸಂಜೆ ವೇಳೆಗೆ ದೇವಾಲಯ ತಲುಪಿತು.