

ಬೆಂಗಳೂರು: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿ ಪುಂಡರು ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಹಾಗೂ ರಾಜ್ಯದ ಹಿತಾಸಕ್ತಿ ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಆದರೆ ಹೆಚ್ಚಿನ ಸಂಘಟನೆಗಳು ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಹರತಾಳ ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಕರವೇ ಟಿ.ಎ. ನಾರಾಯಣಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ ಬಂದ್ಗೆ ಬೆಂಬಲ ಸೂಚಿಸಿಲ್ಲ. ಇದರ ಮಧ್ಯೆಯೂ ಬಂದ್ ಮಾಡಲು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಲ ಸಂಘಟನೆಗಳು ಸಜ್ಜಾಗಿವೆ. ಶನಿವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಬಂದ್ಗೆ ಕರೆ ನೀಡಲಾಗಿದೆ. ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಟೌನ್ಹಾಲ್ನಿಂದ ಫ್ರೀಡಂಪಾರ್ಕ್ ವರೆಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಂದ್ ವೇಳೆ ಬಸ್, ಆಟೋ, ವಾಹನ ಸಂಚಾರ ಸ್ಥಗಿತ ಆಗಬೇಕೆಂಬುದು ಕನ್ನಡ ಸಂಘಟನೆಗಳು ಕರೆ ನೀಡಿವೆ.
ಬೆಂಬಲ ಯಾರ್ಯಾರು?: ಕನ್ನಡ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ, ಓಲಾ, ಊಬರ್, ಏರ್ಪೋರ್ಟ್ ಟ್ಯಾಕ್ಸಿ, ಆಟೋಚಾಲಕರ ಸಂಘ, ಎಪಿಎಂಸಿ ಸೇರಿ ಕೆಲ ಸಂಘಟನೆಗಳು ಬಂದ್ಗೆ ಬೆಂಬಲ ನೀಡುತ್ತಿವೆ. ಹೊಟೇಲ್ ಮಾಲೀಕರ ಸಂಘ, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್್ಸ) ನೈತಿಕ ಬೆಂಬಲ ಘೋಷಿಸಿವೆ.
ಭಾಗಶಃ ಬೆಂಬಲ: ಬೆಳಗಿನ ಪ್ರದರ್ಶನ ಮಾತ್ರ ಬಂದ್ ಮೂಲಕ ಸಿನಿಮಾ ಥಿಯೇಟರ್, ಚಲನಚಿತ್ರ ವಾಣಿಜ್ಯ ಮಂಡಳಿ, ಮಾಲ್ಗಳು, ಬೇಕರಿ, ಬಾರ್ ಆಂಡ್ ರೆಸ್ಟೋರೆಂಟ್, ಅಂಗಡಿ-ಮುಗ್ಗಟ್ಟು, ಬೀದಿಬದಿ ವ್ಯಾಪಾರಿಗಳಿಂದ ಬಂದ್ಗೆ ಭಾಗಶಃ ಬೆಂಬಲ ವ್ಯಕ್ತವಾಗಿದೆ.
ರಜೆ ಅಧಿಕಾರ ಡಿಸಿಗೆ: ಶನಿವಾರ ಎಸ್ಎಸ್ಎಲ್ಸಿ ಪರೀಕ್ಷೆ ಇಲ್ಲ.1 ರಿಂದ 9 ನೇ ತರಗತಿ ವರೆಗಿನ ಕೆಲವು ತರಗತಿಗಳ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಮುಂದೂಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ.
ಕರ್ನಾಟಕ ಬಂದ್ಗೆ ರಾಜ್ಯದಲ್ಲಿ 2 ಸಾವಿರ ಸಂಘಟನೆಗಳು ಬೆಂಬಲ ನೀಡುತ್ತಿವೆ. ಬಂದ್ ಆಗುವುದು ನಿಶ್ಚಿತ. | ವಾಟಾಳ್ ನಾಗರಾಜ್ ಕನ್ನಡಪರ ಹೋರಾಟಗಾರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲವಿರುವುದಿಲ್ಲ. | ಟಿ.ಎ.ನಾರಾಯಣಗೌಡ ಕರವೇ ರಾಜ್ಯಾಧ್ಯಕ್ಷ