ಕಲಾಪದ ವಿಡಿಯೋ ಬಳಕೆ ನಿರ್ಬಂಧಿಸಿ: ಹೈಕೋರ್ಟ್‌ಗೆ ವಕೀಲರ ಸಂಘ ಮನವಿ

highcourt
Published on

ಬೆಂಗಳೂರು: ನ್ಯಾಯಾಲಯ ಕಲಾಪದ ನೇರ ಪ್ರಸಾರದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುವುದು, ಮರು ಪ್ರಸಾರ ಮಾಡುವುದು ಹಾಗೂ ಇನ್ನಿತರ ರೀತಿಯಲ್ಲಿ ಕಾನೂನುಬಾಹಿರವಾಗಿ ಬಳಸಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸೋಮವಾರ ಬೆಳಗ್ಗೆ ಅರ್ಜಿದಾರರ ಪರ ವಕೀಲರು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಏಕಸದಸ್ಯ ಪೀಠದ ಮುಂದೆ ಈ ಬಗ್ಗೆ ಪ್ರಸ್ತಾಪಿಸಿದರು. ಈ ಅರ್ಜಿಯನ್ನು ಮಂಗಳವಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಅರ್ಜಿಯಲ್ಲೇನಿದೆ?

ಇತ್ತೀಚಿನ ದಿನಗಳಲ್ಲಿ ಕಲಾಪದ ವಿಡಿಯೋ ತುಣುಕಗಳನ್ನು ಖಾಸಗಿ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇನ್ನೂ ಕೆಲವರು ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ.

ಇದು ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ. ನ್ಯಾಯದಾನ ಒಂದು ಪ್ರತಿಷ್ಠಿತ ವೃತ್ತಿ. ನ್ಯಾಯಮೂರ್ತಿಗಳ ಹೇಳಿಕೆ ಸಹಿತ ವಿಡಿಯೋಗಳು ಸಾರ್ವಜನಿಕ ವಲಯದಲ್ಲಿ ಆಸಕ್ತಿ ಸೃಷ್ಟಿಸಿವೆ. ಮಾತ್ರವಲ್ಲದೆ ವಕೀಲರನ್ನು ನ್ಯಾಯಮೂರ್ತಿಗಳನ್ನು ಅನಗತ್ಯವಾಗಿ ಟೀಕೆ ಮಾಡುವುದಕ್ಕೆ ಅವಕಾಶ ಸಿಕ್ಕಂತಾಗಿದೆ. ಇದು ಯುವ ವಕೀಲ ಸಮುದಾಯಕ್ಕೆ ತೊಂದರೆ ಉಂಟು ಮಾಡಲಿದೆ. ಜತೆಗೆ ವಕೀಲರು ಮಾಡುವ ವಾದಗಳು ಟ್ರೋಲ್‌ಗೆ ಗುರಿಯಾಗಬಹುದು ಎಂಬ ಆತಂಕವೂ ಶುರುವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಯೂಟ್ಯೂಬ್, ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬ್‌ನಲ್ಲಿ ನೇರ ಪ್ರಸಾರದ ಮೂಲಕ ಪಡೆದು ಅಪ್ಲೋಡ್ ಮಾಡಿರುವ ವಿಡಿಯೋ ತುಣುಕುಗಳನ್ನು ತೆರವು ಮಾಡಬೇಕು. ಈ ರೀತಿಯ ವಿಡಿಯೋಗಳನ್ನು ಬಳಕೆ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಲಾಗಿದೆ.

ಅಲ್ಲದೆ, ವೈವಾಹಿಕ ಪ್ರಕರಣಗಳ ನೇರ ಪ್ರಸಾರವನ್ನು ಮನಬಂದತೆ ಟ್ರೋಲ್ ಮಾಡುವುದು ಸಂವಿಧಾನದ ಪರಿಚ್ಛೇದ 21ರ ಉಲ್ಲಂಘನೆಯಾಗಿದೆ. ಜತೆಗೆ ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯರ ವೈಯಕ್ತಿಕ ವಿಚಾರ ಇನ್ನಿತರ ಮಾಹಿತಿಗಳು ಲೈವ್ ಸ್ಟ್ರೀಮ್ ಮುಖಾಂತರ ಸುಲಭವಾಗಿ ಜನಸಾಮಾನ್ಯರಿಗೆ ತಲುಪುತ್ತಿವೆ. ಇದರಿಂದಾಗಿ ಅವರ ವ್ಯಕ್ತಿತ್ವಕ್ಕೆ ಕಳಂಕ ಉಂಟಾಗುತ್ತಿದೆ ಎಂದು ಮನವಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net