ಕಂಟೇನ್ಮೆಂಟ್ ಜೋನ್‌ಗೆ ಸಾರ್ವಜನಿಕರ ಸಂಚಾರ ನಿಷೇಧಿಸಿ

12 KRN-1
?
Published on

ಕೆ.ಆರ್.ನಗರ: ಗರ್ಭಿಣಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತನೆೆಗೊಂಡ ಪಟ್ಟಣದ ಮುಸ್ಲಿಂ ಬಡಾವಣೆಗೆ ಶಾಸಕ ಸಾ.ರಾ.ಮಹೇಶ್ ಶುಕ್ರವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಪ್ರದೇಶಕ್ಕೆ ಯಾರೂ ಬರಬಾರದು. ಈ ವ್ಯಾಪ್ತಿಯಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸುವುದರ ಜತೆಗೆ ಸೋಂಕು ನಿವಾರಕ ಔಷಧ ಸಿಂಪಡಿಸಬೇಕು. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್, ಪುರಸಭಾ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸುವಂತೆ ಪುರಸಭಾ ಮುಖ್ಯಾಧಿಕಾರಿ ಕೆ.ಶಿವಣ್ಣ ಅವರಿಗೆ ಸೂಚನೆ ನೀಡಿದರು.

ಸಾರ್ವಜನಿಕರು ಹಾಗೂ ವಾಹನಗಳ ಸಂಚಾರ ಇಲ್ಲಿ ಹೆಚ್ಚಾಗಿದ್ದು, ಈಗಿರುವ ಬ್ಯಾರಿಕೇಡ್‌ಗಳನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು.

ಸೋಂಕಿತಳ ಪಾಲಕರು ವೃದ್ಧರಾಗಿದ್ದು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಲ್ಲದೆ ಆಕೆಯ ಜತೆ ಪ್ರಾಥಮಿಕ ಸಂಪರ್ಕಿತದಲ್ಲಿದ್ದವರನ್ನು ಗುರುತಿಸಿ ಎಲ್ಲರನ್ನೂ ಕ್ವಾರಂಟೈನ್ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರು ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು. ನಿತ್ಯ ಜೀವನಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ತಾಲೂಕು ಆಡಳಿತ ಮತ್ತು ಪುರಸಭಾ ಅಧಿಕಾರಿಗಳು ಪೂರೈಸಲಿದ್ದಾರೆ ಎಂದರು.

ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ: ಸೋಂಕಿತೆ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಬಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕುಟುಂಬಸ್ಥರಿಂದ ಮಾಹಿತಿ ಪಡೆದರು. ಅಲ್ಲದೆ ಅಕ್ಕಪಕ್ಕದ ಮನೆಯವರಿಂದಲೂ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದರಲ್ಲದೆ, ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.

ತಹಸೀಲ್ದಾರ್ ಮಂಜುಳಾ, ಟಿಎಚ್‌ಒ ಡಾ.ಕೆ.ಆರ್.ಮಹೇಂದ್ರಪ್ಪ, ಸಿಪಿಐ ಪಿ.ಕೆ.ರಾಜು, ಪಿಎಸ್‌ಐ ವಿ.ಚೇತನ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಹಿರಿಯ ಆರೋಗ್ಯ ಸಹಾಯಕ ಕೆ.ವಿ.ರಮೇಶ್, ಪುರಸಭಾ ಮಾಜಿ ಸದಸ್ಯ ಅಸ್ಲಾಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net