ರಥೋತ್ಸವ ದಿನ ಕುರಾನ್ ಪಠಣ ಮಾಡದಂತೆ ನಿರ್ಬಂಧಿಸಿ

IMG-20250328-WA0024
ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದಂದು ಕುರಾನ್ ಪಠಣಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಶಿರಸ್ತೆದಾರ್ ರಂಗಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು. ರಾಮಧೂತ ಹಿಂದು ಸಮಾಜದ ಮುಖಂಡ ಸಕಲೇಶಪುರ ರಘು ಇತರರಿದ್ದರು.
Published on

ಬೇಲೂರು: ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದ ದಿನದಂದು ಮುಸ್ಲಿಂ ಧರ್ಮಗುರು ಖಾಜಿ ಅವರಿಂದ ಕುರಾನ್ ಪಠಣ ಮಾಡದಂತೆ ನಿಬರ್ಂಧಿಸಬೇಕು ಎಂದು ರಾಮಧೂತ ಹಿಂದು ಸಮಾಜ ಹಾಗೂ ಶ್ರೀ ಚನ್ನಕೇಶವಸ್ವಾಮಿ ಭಕ್ತರು ತಾಲೂಕು ಕಚೇರಿ ಶಿರಸ್ತೇದಾರ್ ರಂಗಸ್ವಾಮಿ ಹಾಗೂ ದೇಗುಲ ಇಒ ಯೋಗೀಶ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.

ರಾಮಧೂತ ಹಿಂದು ಸಮಾಜದ ಮುಖಂಡ ಸಕಲೇಶಪುರ ರಘು ಮಾತನಾಡಿ, ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ನಡೆಯುವ ರಥೋತ್ಸವವು ಸೌಹಾರ್ದದ ಸಂಕೇತವಾಗಿದೆ. ಆದರೆ ಕೆಲ ವರ್ಷಗಳ ಹಿಂದೆ ಯಾರೋ ಒಬ್ಬರ ಹಿತಾಸಕ್ತಿಗಾಗಿ ಮುಸ್ಲಿಂ ಧರ್ಮಗುರು ಖಾಜಿ ಅವರು ರಥೋತ್ಸವಕ್ಕೂ ಮುನ್ನ ರಥದ ಮುಂದೆ ನಿಂತು ಕುರಾನ್ ಪಠಣ ಮಾಡಿದ್ದರಿಂದ ಇದು ಗೊಂದಲ ಉಂಟಾಗಿತ್ತು. ಅದರೆ ಈ ಬಾರಿ ಯಾವುದೇ ಕಾರಣಕ್ಕೂ ಕುರಾನ್ ಪಠಣಕ್ಕೆ ಅವಕಾಶ ನೀಡದೆ ಸಂಪ್ರದಾಯದಂತೆ ದೇಗುಲದಲ್ಲಿ ಸೇವೆ ಸಲ್ಲಿಸುವ ಪಟೇಲರು, ಅಡ್ಡೆಗಾರರು, ಪೊಲೀಸರು ಪ್ರತಿಯೊಬ್ಬರಿಗೂ ಗೌರವವನ್ನು ದೇವಾಲಯದಿಂದ ನೀಡಲಾಗುತ್ತಿದೆ. ಅದೇ ರೀತಿ ಖಾಜಿ ಅವರಿಗೂ ಗೌರವ ನೀಡಲಿ. ಅದನ್ನು ಬಿಟ್ಟು ಕುರಾನ್ ಪಠಣಕ್ಕೆ ಅವಕಾಶ ಕೊಟ್ಟು ಹಿಂದು ಧರ್ಮಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು. ಇದಕ್ಕೆ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ್ದಾಗಿದ್ದು, ಮುಂದೆ ಯಾವುದೇ ರೀತಿಯಲ್ಲೂ ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.

ದೇಗುಲದ ಮ್ಯಾನ್ಯುಯಲ್‌ನಲ್ಲೂ ಕುರಾನ್ ಪಠಣಕ್ಕೆ ಅವಕಾಶವಿಲ್ಲ. ಖಾಜಿ ಅವರಿಗೆ ಮರ್ಯಾದೆ ನೀಡಿದ ನಂತರ ಅವರು ದೇವರಿಗೆ ವಂದಿಸಿ ತೆರಳುವ ಉಲ್ಲೇಖವಿದೆ. ಅದನ್ನು ಪಾಲಿಸುವಂತೆ ಮನವಿ ಮಾಡಿದ್ದೇವೆ. ರಥೋತ್ಸವದ ಸಂಬಂಧ ಕರೆದಿದ್ದ ಶಾಂತಿ ಸಭೆಯಲ್ಲಿ ಎಎಸ್ಪಿ ಹಾಗೂ ಎಲ್ಲ ಧರ್ಮಗಳ ಮುಖಂಡರ ಸಮ್ಮುಖದಲ್ಲಿ ಮುಸ್ಲಿಂ ಧರ್ಮಗುರುಗಳೇ ಇದು ಒಂದು ಕುಟುಂಬದ ಪರಂಪರೆಯಾಗಿದ್ದು ಇದಕ್ಕೂ ನಮಗೂ ಸಂಬಂಧವಿಲ್ಲ. ದೇಗುಲದ ಆಡಳಿತ ಮಂಡಳಿ ಯಾವ ಕ್ರಮ ಕೈಗೊಂಡರೂ ನಮ್ಮ ಸಹಮತ ಇದೆ ಎಂದು ತಿಳಿಸಿದ್ದಾರೆ. ಇದನ್ನು ಮತ್ತೆ ಪ್ರಚೋದಿಸುವ ಅವಶ್ಯಕತೆ ಇಲ್ಲ. ಆ ಕುಟುಂಬದವರಿಗೆ ವಂದನೆ ಸಲ್ಲಿಸುವ ಅವಕಾಶ ಇದೆ. ಆದರೆ ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಉಲ್ಲಂಘನೆ ಆದಲ್ಲಿ ಇದಕ್ಕೆ ತಾಲೂಕು ಆಡಲಿತವೇ ನೇರ ಹೊಣೆಯಾಗಲಿ ಎಂದು ಎಚ್ಚರಿಕೆ ನೀಡಿದರು.

ಅದೇ ರೀತಿ ಜಾತ್ರಾ ಮಹೋತ್ಸವದ ಸಮಯದಲ್ಲಿ ಹಿಂದು ದೇಗುಲದ ಸುತ್ತಮುತ್ತ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಹಿಂದು ಧರ್ಮದವರಿಗೆ ಆದ್ಯತೆ ನೀಡುವಂತೆ ದೇಗುಲದ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು. ಹಿಂದು ಸಮಾಜದ ಮುಖಂಡರಾದ ಮೋಹನ್, ಮಂಜುನಾಥ್, ಶಿವಶಂಕರ್, ಹೇಶ್, ಸುಪ್ರೀತ್, ರಾಜೇಶ್, ಧನು, ದರ್ಶನ್, ರಕ್ಷಿತ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net