

ನವದೆಹಲಿ: ಲ್ಯಾಪ್ಟಾಪ್, ಟ್ಯಾಬ್ಲೆಟ್ ಮತ್ತು ಹಲವು ರೀತಿಯ ಕಂಪ್ಯೂಟರ್ಗಳ ಆಮದು ಮೇಲೆ ಕೇಂದ್ರ ಸರ್ಕಾರ ಗುರುವಾರ ನಿರ್ಬಂಧ ಹೇರಿದೆ. ಇದು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಜತೆಗೆ ಚೀನಾದಂತಹ ದೇಶಗಳಿಂದ ಸರಕುಗಳ ಆಮದು ಮೊಟಕುಗೊಳಿಸಲಿದೆ. ಇಂಥ ವಸ್ತುಗಳ ಆಮದುದಾರರು ಇನ್ನು ಸರ್ಕಾರದಿಂದ ಅನುಮತಿ ಅಥವಾ ಪರವಾನಗಿ ಪಡೆಯಬೇಕಾಗುತ್ತದೆ.
ಲ್ಯಾಪ್ಟಾಪ್, ಟ್ಯಾಬ್ಲೆಟ್, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್, ಅಲ್ಟ್ರಾ ಸ್ಮಾಲ್ ಫಾಮ್ರ್ ಫ್ಯಾಕ್ಟರ್ ಕಂಪ್ಯೂಟರ್, ಸರ್ವರ್ಗಳ ಆಮದು ನಿರ್ಬಂಧಿಸಿ ತಕ್ಷಣದಿಂದಲೇ ಜಾರಿ ಮಾಡಲಾಗಿದೆ. ಮೈಕ್ರೋ ಕಂಪ್ಯೂಟರ್ಗಳು, ದೊಡ್ಡ ಅಥವಾ ಮೇನ್ಫ್ರೇಮ್ ಕಂಪ್ಯೂಟರ್ಗಳು, ಕೆಲವು ಡೇಟಾ ಸಂಸ್ಕರಣಾ ಯಂತ್ರಗಳ ಮೇಲೂ ನಿರ್ಬಂಧಗಳಿವೆ. ಪರವಾನಗಿ ಪಡೆದುಕೊಂಡರೆ ಮಾತ್ರ ಈ ಎಲ್ಲಾ ವಸ್ತು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮದು ನಿರ್ಬಂಧದಲ್ಲಿ ಕೆಲ ವಿನಾಯಿತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್ಟಿ) ಅಧಿಸೂಚನೆಯಲ್ಲಿ ತಿಳಿಸಿದೆ. ಹೊಸ ಆವಿಷ್ಕಾರ, ಸಂಶೋಧನೆ, ಮೌಲ್ಯಮಾಪನ, ರಿಪೇರಿ ಮತ್ತು ರಿಟರ್ನ್, ಉತ್ಪನ್ನ ಅಭಿವೃದ್ಧಿ ಉದ್ದೇಶಗಳಿಗಾಗಿ 20 ಸರಕುಗಳವರೆಗೆ ವಿನಾಯಿತಿ ನೀಡಲಾಗುತ್ತದೆ. ಇ-ಕಾಮರ್ಸ್ ಪೋರ್ಟಲ್, ಪೋಸ್ಟ್ ಅಥವಾ ಕೊರಿಯರ್ ಮೂಲಕ ಖರೀದಿಸಲಾಗುವ ಸರಕುಗಳಿಗೂ ಈ ನಿಯಮ ಅನ್ವಯವಾಗಲಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲೇ ಸರಕುಗಳನ್ನು ಉತ್ಪಾದಿಸಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಉತ್ಪಾದನೆ-ಸಂಯೋಜಿತ ಪೋ›ತ್ಸಾಹ ಯೋಜನೆಯಿಂದ ಎಲೆಕ್ಟ್ರಾನಿಕ್ ಉಪಕರಣ ತಯಾರಿಕೆಗೆ ಉತ್ತೇಜನ ನೀಡಿದೆ. ಕಸ್ಟಮ್ಸ್ ಸುಂಕ ಹೆಚ್ಚಿಸುವಂತಹ ಎಲೆಕ್ಟ್ರಾನಿಕ್ ವಸ್ತುಗಳ ದೇಶೀಯ ಉತ್ಪಾದನೆಗೆ ಅನುಕೂಲ ಕಲ್ಪಿಸಿದೆ. ಈಗ ಈ ನಿರ್ಬಂಧ ಕ್ರಮದಿಂದ ಮತ್ತಷ್ಟು ಅನುಕೂಲ ಆಗಲಿದೆ.
ಚೀನಾದಿಂದ ಭಾರತಕ್ಕೆ ಅಪಾರ ಪ್ರಮಾಣದ ಸರಕು ಆಮದಾಗುತ್ತಿದೆ. ಇದರಲ್ಲಿ ಶೇ. 65 ಸರಕು ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು ಮತ್ತು ರಾಸಾಯನಿಕ ವಿಭಾಗಕ್ಕೆ ಸೇರಿವೆ. ದಿನನಿತ್ಯದ ಬಳಕೆ ಮತ್ತು ಕೈಗಾರಿಕಾ ಉತ್ಪನ್ನಗಳಾದ ಮೊಬೈಲ್ ಫೋನ್, ಲ್ಯಾಪ್ಟಾಪ್, ಘಟಕಗಳು, ಸೌರ ಕೋಶ ಮಾಡ್ಯೂಲ್ಗಳಿಗೆ ಭಾರತ ಚೀನಾದ ಮೇಲೆ ಅವಲಂಬಿತವಾಗಿದೆ.