

ನವದೆಹಲಿ: ಪ್ರತಿ ಕಿಲೋಗೆ 65 ಡಾಲರ್ಗಿಂತ (ಸುಮಾರು 5600 ರೂ.) ಕಡಿಮೆ ಬೆಲೆ ಹೊಂದಿರುವ ‘ಮನುಷ್ಯರ ಕಚ್ಚಾ ಕೂದಲ’ನ್ನು ವಿದೇಶಗಳಿಗೆ ರಫ್ತು ಮಾಡುವುದಕ್ಕೆ ಕೇಂದ್ರ ಸರ್ಕಾರ ಸೋಮವಾರ ನಿಷೇಧ ಹೇರಿದೆ. 2022ರ ಜನವರಿಯಲ್ಲಿ ಈ ರಫ್ತಿನ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಈಗ ನಿರ್ಬಂಧವನ್ನು ನಿಷೇಧವನ್ನಾಗಿ ಪರಿವರ್ತಿಸಲಾಗಿದೆ.
65 ಡಾಲರ್ಗಿಂತ ಹೆಚ್ಚಿನ ಬೆಲೆ ಹೊಂದಿದ್ದರೆ ರಫ್ತಿಗೆ ಅನುಮತಿ ಇದೆ ಎಂದು ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮಯನ್ಮಾರ್, ಚೀನಾ ಮುಂತಾದ ರಾಷ್ಟ್ರಗಳಿಗೆ ‘ಮನುಷ್ಯರ ಕೂದಲು’ ಕಳ್ಳಸಾಗಾಣಿಕೆ ಮಾಡಲಾಗುತ್ತಿದ್ದು, ಸ್ಥಳೀಯ ಕೈಗಾರಿಕೆಗಳಿಗೆ ಮತ್ತು ರಫ್ತಿಗೆ ಇದರಿಂದ ಧಕ್ಕೆ ಆಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಭಾರತದಲ್ಲಿ ಆಂಧ್ರ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ ಈ ಉದ್ಯಮದಲ್ಲಿ ತೊಡಗಿಕೊಂಡಿವೆ. ಭಾರತಕ್ಕೆ ಈ ಕ್ಷೇತ್ರದಲ್ಲಿ ಚೀನಾ, ಕಾಂಬೋಡಿಯಾ, ವಿಯೆಟ್ನಾಂ, ಮಯನ್ಮಾರ್ ಪ್ರತಿಸ್ಪರ್ಧಿಗಳಾಗಿವೆ. ಮನೆ, ದೇವಸ್ಥಾನಗಳಿಂದ ಮನುಷ್ಯರ ಕೂದಲು ಸಂಗ್ರಹಿಸಿ ಜಾಗತಿಕ ಸೌಂದರ್ಯ ಮಾರುಕಟ್ಟೆಗೆ ವಿಗ್ ಮತ್ತಿತರ ವಸ್ತುಗಳನ್ನು ತಯಾರಿಸುವುದಕ್ಕಾಗಿ ಪೂರೈಸಲಾಗುತ್ತದೆ. ಏಪ್ರಿಲ್ನಿಂದ ನವೆಂಬರ್ವರೆಗೆ 123.96 ದಶಲಕ್ಷ ಡಾಲರ್ ಮೌಲ್ಯದ ಕೂದಲನ್ನು ರಫ್ತು ಮಾಡಲಾಗಿದೆ.