

ಶಿವಮೊಗ್ಗ: ಗರ್ಭಿಣಿಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆ ಮೂಲಕ ಹುಟ್ಟುವ ಮಗು ಅಂಗವೈಕಲ್ಯದಿಂದ ಪಾರಾಗುವುದನ್ನು ತಡೆಗಟ್ಟಬಹುದು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಹೇಳಿದರು.
ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಿಯಮಿತ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ಮೂಲಕ ಹುಟ್ಟುವ ಮಗುವಿನ ಅಂಗವೈಕಲ್ಯ ತಡೆಯಬಹುದು. ಅನೇಕರು ಈ ವಿಚಾರದಲ್ಲಿ ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಕರು ಬೇರೆ ಮಕ್ಕಳೊಂದಿಗೆ ಈ ಮಕ್ಕಳನ್ನು ಹೋಲಿಕೆ ಮಾಡಬಾರದು. ಆತ್ಮಸ್ಥೈರ್ಯ ತುಂಬಬೇಕು. ಅನೇಕ ಸಂಘ ಸಂಸ್ಥೆಗಳು ಅಂಗವಿಕಲರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಭಗವಂತನ ಅತ್ಯುತ್ತಮ ಸೃಷ್ಟಿಯೇ ಮಾನವ. ಎಲ್ಲ ಅಂಗಾಂಗಗಳು ಸಮರ್ಪಕವಾಗಿದ್ದರೂ ಏನೂ ಸಾಧನೆ ಮಾಡದೆ ಜೀವನ ಮುಗಿಸುವವರು ನಿಜವಾದ ಅಂಗವಿಕಲರು. ಇಲ್ಲಿ ನೆರೆದಿರುವ ಅಂಗವಿಕಲರಿಗೆ ಏನನ್ನಾದರೂ ಸಾಧಿಸಬೇಕೆಂಬ ಛಲವಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಮಾತನಾಡಿ, ಯಾರು ನಾಡು -ನುಡಿಗೆ ದ್ರೋಹ ಮಾಡುತ್ತಿದ್ದಾರೋ ಅವರೇ ನಿಜವಾದ ಅಂಗವಿಕಲರು. ನಿಜವಾದ ಅಂಗವಿಕಲರಲ್ಲಿ ವಿಶೇಷ ಶಕ್ತಿಯನ್ನು ಭಗವಂತ ನೀಡಿದ್ದು, ವಿಶೇಷವಾದದ್ದನ್ನು ಅವರು ಸಾಧಿಸಲು ನಾವು ಉತ್ತೇಜಿಸಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಚ್.ಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಇತರರಿದ್ದರು.