

ಹುಣಸೂರು: ಶಾಲೆಯ ಆವರಣದ ತುಂಬೆಲ್ಲಾ ಬಾಲ ಕೃಷ್ಣ, ರಾಧಯರದ್ದೇ ಕಲರವು, ಮಕ್ಕಳನ್ನು ಸುಮ್ಮನಿರಿಸಿ ಸಿಂಗರಿಸಲು ಪಾಲಕರ ಪರದಾಟ…
ಇದು, ಶತಮಾನಗಳ ಇತಿಹಾಸ ಹೊಂದಿರುವ ನಗರದ ಪೊಲೀಸ್ ಠಾಣೆಯ ಹಿಂಭಾಗವಿರುವ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣಜನ್ಮಾಷ್ಠಮಿ ಆಚರಣೆಯ ಸಂದರ್ಭದಲ್ಲಿ ಕಂಡುಬಂದ ದೃಶ್ಯ.
ಸುಮಾರು 200ಕ್ಕೂ ಹೆಚ್ಚು ಮಕ್ಕಳು ಕೃಷ್ಣ-ರಾಧೆ, ಕೃಷ್ಣ-ಕುಚೇಲ ಮುಂತಾದ ವೇಷಧಾರಿಗಳಾಗಿ ಸಂಭ್ರಮಿಸಿದರು. ಬೆಣ್ಣೆಕದ್ದ ಕೃಷ್ಣ, ಪೂತನಿ ಸಂಹರಿಸಿದ ಕೃಷ್ಣ, ರಾಧೆಯೊಂದಿಗೆ ಸಲ್ಲಾಪದಲ್ಲಿ ತೊಡಗಿರುವ ಕೃಷ್ಣ ಹೀಗೆ ತಮ್ಮ ಮಕ್ಕಳನ್ನು ಕೃಷ್ಣನ ವಿವಿಧ ಅವತಾರಗಳನ್ನು ಕಂಡು ಪಾಲಕರು ಸಂತಸಗೊಂಡರು.
ಮುಖ್ಯಶಿಕ್ಷಕ ಡಾ.ಮಾದುಪ್ರಸಾದ್ ಪುಟಾಣಿ ಮಕ್ಕಳಿಗೆ ಕೃಷ್ಣನ ಬಾಲಲೀಲೆಯಿಂದ ಆರಂಭಗೊಂಡು ಗೋವರ್ಧನ ಗಿರಿಧಾರಿಯಾದವರೆಗಿನ ಕಥೆಯನ್ನು ವಿವರಿಸಿದಾಗ ಮಕ್ಕಳು ಕುತೂಹಲದಿಂದ ಆಲಿಸಿದರು. ಕೃಷ್ಣ ದೇವರು ಮಾತ್ರವಲ್ಲ, ನಮ್ಮ ಜೀವನದ ಪ್ರಮುಖ ಘಟ್ಟಗಳಲ್ಲೂ ಕೃಷ್ಣನ ಜೀವನಾದರ್ಶಗಳು ನಮಗೆ ದಾರಿದೀಪವಾಗುತ್ತದೆ ಎಂದು ತಿಳಿಸಿದರು. ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ಶಿವರಾಮ, ಹರೀಶ್, ಸಹಶಿಕ್ಷಕರು ಮತ್ತು ಪಾಲಕರು ಹಾಜರಿದ್ದರು.