ಭಾಸ್ಕರ್‌ರಾವ್ ಉತ್ತರವಿಳ್ಳಿ ಗೆ ಜಾಮೀನು: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹೈಕೋರ್ಟ್ ಮಂಜೂರು

highcourt
Published on

ಬೆಂಗಳೂರು: ನ್ಯಾಯಾಲಯದ ಕುರಿತು ಮನಬಂದಂತೆ ಮಾತನಾಡಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಬಳ್ಳಾರಿ ಜಿಲ್ಲೆ ತೋರಣಗಲ್ಲಿನ ಜೆಎಸ್‌ಡಬ್ಲೂೃ ಸ್ಟೀಲ್ ಪಬ್ಲಿಕ್ ಲಿಮಿಟೆಡ್ ಕಂಪೆನಿಯ ಮಾಜಿ ಜೂನಿಯರ್ ಮ್ಯಾನೇಜರ್ ಭಾಸ್ಕರ್‌ರಾವ್ ಉತ್ತರವಿಳ್ಳಿ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ವಿಚಾರವಾಗಿ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಜಂ ಮಂಡಲಂ ಮೂಲದ ಭಾಸ್ಕರ್‌ರಾವ್ ವಿರುದ್ಧ ಹೈಕೋರ್ಟ್ 2023ರಲ್ಲಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿಯು ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಭಾಸ್ಕರ್‌ರಾವ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಜೊತೆಗೆ ಜಾಮೀನು ನೀಡುವಂತೆ ಲಿಖಿತ ಮನವಿಯನ್ನು ಸಲ್ಲಿಸಿದರು. ಸದ್ಯ ಭಾಸ್ಕರ್‌ರಾವ್ ಜೈಲಿನಲ್ಲಿದ್ದು, ನಿಯಮಿತವಾಗಿ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಹಾಗಾಗಿ ಅವರು ಸೆ.9ರಂದು ಸಲ್ಲಿಸಿರುವ ಲಿಖಿತ ಮನವಿಯನ್ನು ಜಾಮೀನು ಅರ್ಜಿಯನ್ನಾಗಿ ಪರಿಗಣಿಸಿ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗುತ್ತದೆ. ಆದರೆ, ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಮುಂದುವರಿಯಲಿದೆ ಎಂದು ನ್ಯಾಯಪೀಠ ಹೇಳಿ, ಜಾಮೀನು ಮಂಜೂರು ಮಾಡಿ ಆದೇಶಿಸಿತು.

ಷರತ್ತೇನು?

ಆರೋಪಿ ಭಾಸ್ಕರ್‌ರಾವ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕಕ್ಷಕರಿಗೆ 1 ಲಕ್ಷ ರೂ. ಮೊತ್ತದ ವೈಯುಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿಯನ್ನು ತಕ್ಷಣ ಒದಗಿಸಬೇಕು. ಬೇರೆ ಯಾವುದಾದರೂ ಪ್ರಕರಣದಲ್ಲಿ ಭಾಸ್ಕರ್‌ರಾವ್ ಬೇಕಾಗಿಲ್ಲವಾದರೆ ಜೈಲು ಅಧೀಕ್ಷಕರು ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕು.

ಅದೇ ರೀತಿ ನ್ಯಾಯಾಲಯದ ಆದೇಶ ಲಭ್ಯವಾದ 10 ದಿನಗಳೊಳಗೆ 1 ಲಕ್ಷ ರೂ.ಮೊತ್ತದ ವೈಯುಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರು ಭದ್ರತೆಯನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಒದಗಿಸಬೇಕು. ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಇದ್ದಾಗ ಆರೋಪಿ ಖುದ್ದು ಹಾಜರಾಗಬೇಕು ಎಂದು ಷರತ್ತುಗಳನ್ನ ವಿಧಿಸಿ ಜಾಮೀನು ಆದೇಶ ಹೊರಡಿಸಿದ ನ್ಯಾಯಪೀಠ, ವಿಚಾರಣೆಯನ್ನು ಅ.15ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net