ಅತ್ಯಾಚಾರ ಕಾನ್​ಸ್ಟೇಬಲ್ ಗೆ ಜಾಮೀನು ರದ್ದು ಹೈಕೋರ್ಟ್ ಆದೇಶ

highcourt
Published on

ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಮಹದೇವಪುರ ಪೊಲೀಸ್ ಠಾಣೆಯ ಕಾನ್​ಸ್ಟೇಬಲ್ ಗೆಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದರಿಂದ ಆತನ ವಿರುದ್ಧ ವಿಧಾನಸೌದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ನಿರ್ದೇಶನ ನೀಡಿದೆ.

ಬೆಳಗಾವಿಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಮೂಲದ ಫಕೀರಪ್ಪ ಹಟ್ಟಿ ಎಂಬಾತನಿಗೆ ಮಂಜೂರಾಗಿದ್ದ ಜಾಮೀನು ಪ್ರಶ್ನಿಸಿ ಪ್ರಕರಣದಲ್ಲಿ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಸುಳ್ಳು ಮಾಹಿತಿ ಕೊಟ್ಟ ಹಿನ್ನೆಲೆಯಲ್ಲಿ ಆರೋಪಿಗೆ 1 ಲಕ್ಷ ರೂ. ದಂಡ ವಿಧಿಸಿದ್ದು, ಮುಂದಿನ ಎರಡು ವಾರಗಳಲ್ಲಿ ದಂಡದ ಮೊತ್ತವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ಪ್ರಕರಣ ಪೊಲೀಸರಿಗೆ ಸಂಬಂಧಿಸಿದ್ದು ಎಂಬ ಕಾರಣಕ್ಕೆ ತನಿಖಾಧಿಕಾರಿ, ಆರೋಪಿ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ಕೆಲವು ಮಾಹಿತಿಗಳನ್ನು ಗೌಪ್ಯವಾಗಿಟ್ಟಿದ್ದಾರೆ. ಹಾಗಾಗಿ ಈ ಹಿಂದೆ ಪಡೆದಿರುವ ಜಾಮೀನು ರದ್ದುಗೊಳಿಸಲು ಪ್ರಕರಣ ಎಲ್ಲ ರೀತಿಯಲ್ಲೂ ಅರ್ಹವಾಗಿದೆ. ಆರೋಪಿ ವಿಚಾರಣೆಯನ್ನು ಎದುರಿಸಲಿ ಎಂದು ನ್ಯಾಯಪೀಠ ತಿಳಿಸಿದೆ.

ಆರೋಪಿ ಸೆಷನ್ಸ್ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ. ಇದನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆದರೆ, ಆರೋಪಿ ನಿರೀಕ್ಷಣಾ ಜಾಮೀನು ರದ್ದಾದ ವಿಚಾರ ಕೋರ್ಟ್ ಗಮನಕ್ಕೆ ತರದೆ ಆರೋಪಿ ಹೊರಗಿದ್ದ. ಆ ಹಿನ್ನೆಲೆಯಲ್ಲಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಾಲಯ ಕಾನ್‌ಸ್ಟೆಬಲ್ ವಿರುದ್ಧ ದೂರು ದಾಖಲಿಸಿ, ಕೂಡಲೇ ವಶಕ್ಕೆ ಪಡೆಯಲು ಪೊಲೀಸ್ ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.

ಪ್ರಕರಣವೇನು:)
ಮಹದೇವಪುರ ಠಾಣೆಯಲ್ಲಿ ಫಕೀರಪ್ಪ ಹಟ್ಟಿ ಕಾನ್​ಸ್ಟೇಬಲ್  ಆಗಿ ಸೇವೆ ಸಲ್ಲಿಸುತ್ತಿದ್ದ. ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಠಾಣೆಗೆ ತೆರಳಿದಾಗ ಸಂತ್ರಸ್ತೆ ಪರಿಚಯವಾಗಿದ್ದರು. ವಿವಾಹವಾಗುವುದಾಗಿ ಆಕೆಯನ್ನು ನಂಬಿಸಿ 2019ರಿಂದ 2022ರವರೆಗೆ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿದೆ. ಆ ಬಗ್ಗೆ ಪೊಲೀಸ್ ಠಾಣೆ, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದರೂ ಎಫ್‌ಐಆರ್ ದಾಖಲಿಸಿರಲಿಲ್ಲ. ಕೊನೆಗೆ ಸಂತ್ರಸ್ತೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net