

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು ಗ್ಯಾಂಗ್‌ನ ಮೂವರು ಆರೋಪಿಗಳಿಗೆ ಸೋಮವಾರ ಷರತ್ತುಬದ್ಧ ಜಾಮೀನು ಸಿಕ್ಕಿದೆ.
16ನೇ ಆರೋಪಿ ಕೇಶವಮೂರ್ತಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೇಶವಮೂರ್ತಿ ಪರ ವಕೀಲ ರಂಗನಾಥ್‌ರೆಡ್ಡಿ ಹಾಗೂ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.
15ನೇ ಆರೋಪಿ ಕಾರ್ತಿಕ್ ಹಾಗೂ 17ನೇ ಆರೋಪಿ ನಿಖಿಲ್ ನಾಯಕ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಸೆಷನ್ಸ್ ನ್ಯಾಯಾಲಯ ಪುರಸ್ಕರಿಸಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಂದ ಹಣದ ಆಮಿಷಕ್ಕೆ ಒಳಗಾಗಿ ಶವ ಸಾಗಿಸುವಾಗ ಮತ್ತು ಪೊಲೀಸರಿಗೆ ಶರಣಾಗುವಲ್ಲಿ ಮಾತ್ರ ಇವರ ಪಾತ್ರವಿತ್ತು. ಹತ್ಯೆಗೂ ಈ ಆರೋಪಿಗಳಿಗೆ ಸಂಬಂಧವಿಲ್ಲ ಎಂದು ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಹೇಳಲಾಗಿತ್ತು. ಈ ಮೂವರ ವಿರುದ್ಧ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಿದ ಆರೋಪವಿದೆ. ಇದು ಜಾಮೀನು ನೀಡದಿರುವ ಆರೋಪವಲ್ಲ ಎಂದು ವಾದ ಮಂಡಿಸಿದ್ದರು.
ರೇಣುಕಸ್ವಾಮಿ ಶವ ಸಾಗಿಸಲು ಈ ಮೂವರು ಕೈಜೋಡಿಸಿದ್ದರು. ನಟ ದರ್ಶನ್ ಕಡೆಯವರಿಂದ 5 ಲಕ್ಷ ರೂ. ಮುಂಗಡ ಪಡೆದಿದ್ದ ಕೇಶವಮೂರ್ತಿ, ಕಾರ್ತಿಕ್ ಮತ್ತು ನಿಖಿಲ್ ನಾಯಕ್‌ನನ್ನು ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದಿದ್ದ. ನಂತರ ಈ ಮೂವರೂ ಪೊಲೀಸರ ಮುಂದೆ ಶರಣಾಗಿದ್ದರು. ದರ್ಶನ್ ಕಡೆಯವರು ಹಣದ ಆಮಿಷವೊಡ್ಡಿ ಜಾಮೀನು ಕೊಡಿಸುವ ಭರವಸೆ ನೀಡಿದ್ದರಿಂದ ಪೊಲೀಸರ ಮುಂದೆ ಶರಣಾಗಿದ್ದರು.
ದರ್ಶನ್, ಪವಿತ್ರಾಗೌಡಗಿಲ್ಲ ಬೇಲ್
ಸೆ.27ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ
ದರ್ಶನ್ ಮತ್ತು ಪವಿತ್ರಾಗೌಡ ಜಾಮೀನು ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ದರ್ಶನ್ ಅರ್ಜಿ ಸೆ.27ಕ್ಕೆ ಹಾಗೂ ಪವಿತ್ರಾಗೌಡ ಅರ್ಜಿ ಸೆ.25ಕ್ಕೆ ಮುಂದೂಡಿಕೆಯಾಗಿದೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಸರ್ಕಾರಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಮನವಿ ಮಾಡಿದರು. ಮನವಿ ಪರಿಗಣಿಸಿದ 57ನೇ ಸಿಸಿಎಚ್ ನ್ಯಾಯಾಲಯದ ನ್ಯಾ.ಜಯಶಂಕರ್ ಅವರು ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದರು.
ದರ್ಶನ್‌ಗೆ ಐಟಿ ಕಂಟಕ
ರೇಣುಕಸ್ವಾಮಿ ಕೊಲೆ ಮರೆಮಾಚಲು ಪ್ರಕರಣದ ಇತರ ಆರೋಪಿಗಳಿಗೆ ದರ್ಶನ್ 70 ಲಕ್ಷ ರೂ. ನೀಡಿದ್ದ ಸಂಬಂಧ ಪುರಾವೆ ಸಿಕ್ಕ ಹಿನ್ನೆಲೆಯಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು, ಹಣದ ಮೂಲದ ಬಗ್ಗೆ ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಕೋರಿದ್ದರು. ಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಐಟಿ ಅಧಿಕಾರಿಗಳು ಮಂಗಳವಾರ ದರ್ಶನ್ ವಿಚಾರಣೆ ನಡೆಸುವ ಸಾಧ್ಯತೆಯಿದೆ.