ದೋಷಾರೋಪಣಾ ಪಟ್ಟಿ ಸಲ್ಲಿಸಿದ ನಂತರ ಜಾಮೀನು ಅರ್ಜಿ ಸಲ್ಲಿಕೆ

Darshan Renukaswamy
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಳಿಕ ನಟ ದರ್ಶನ್ ಹಾಗೂ ಇತರರಿಗೆ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ದರ್ಶನ್ ಪರ ವಕೀಲ ರಂಗನಾಥರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಾಮೀನು ಅರ್ಜಿ ಸಲ್ಲಿಕೆ ವಿಳಂಬವಾಗಬೇಕು ಎಂಬ ಕಾರಣಕ್ಕಾಗಿಯೇ ಅಭಿಯೋಜನೆ ಅಧಿಕಾರಿಗಳು ತನಿಖೆಯಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅಭಿಯೋಜನೆಯಲ್ಲಿ ಉದ್ದೇಶಪೂರ್ವಕವಾಗಿಯೇ ತನಿಖಾ ವರದಿ ಸಲ್ಲಿಕೆಯನ್ನು ವಿಳಂಬ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ನ್ಯಾಯಾಲಯದ ವಿಚಾರಣೆ ವೇಳೆ ತನಿಖೆಗೆ ಹಿನ್ನಡೆಯುಂಟು ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ರಿಮ್ಯಾಂಡ್ ಅರ್ಜಿಯಲ್ಲಿ ತನಿಖೆಯ ಸೂಕ್ತ ವಿವರಗಳನ್ನು ದಾಖಲಿಸದೆ ಜಾಮೀನು ಅರ್ಜಿ ಸಲ್ಲಿಕೆಗೆ ವಿಳಂಬವಾಗುವಂತೆ ಮಾಡಲಾಗುತ್ತಿದೆ. ಪೊಲೀಸ್ ಮ್ಯಾನ್ಯುಯೆಲ್‌ನಲ್ಲಿ ೯೦ ದಿನಗಳಲ್ಲಿ ಅಂತಿಮ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲೇಬೇಕು. ಅನಂತರ ನಾವು ದರ್ಶನ್ ಹಾಗೂ ಇತರರ ಪರವಾಗಿ ಜಾಮೀನು ಅರ್ಜಿಯನ್ನು ಸಲ್ಲಿಸುತ್ತೇವೆ ಎಂದರು.
ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ಸಮರ್ಪಕ ಮಾಹಿತಿಯನ್ನು ನೀಡುತ್ತಿಲ್ಲ. ಯಾವ ಆರೋಪಿಯಿಂದ ಯಾವ ರೀತಿ ಹೇಳಿಕೆ ಪಡೆಯಲಾಗಿದೆ. ಯಾವ ವ್ಯಕ್ತಿ ಯಾವ ರೀತಿಯ ಸಾಕ್ಷಿಯಾಗಿದ್ದಾನೆ. ಪಂಚರ ಸಾಕ್ಷಿಯೇ, ಮಹಜರು ಸಾಕ್ಷಿಯೇ, ಪ್ರತ್ಯಕ್ಷ ಸಾಕ್ಷಿಯೇ, ಸಾಂದರ್ಭಿಕ ಸಾಕ್ಷಿಯೇ ಎಂಬ ವಿವರಣೆಗಳನ್ನು ನೀಡುತ್ತಿಲ್ಲ. ಇದರಿಂದ ಜಾಮೀನು ಅರ್ಜಿ ಸಲ್ಲಿಸಲು ತಡೆ ನೀಡುವ ಪ್ರಯತ್ನ ಆಗಿರಬಹುದು ಎಂದು ದೂರಿದರು.
ಯಾವುದೇ ಪ್ರಕರಣದಲ್ಲಾದರೂ ರಿಮ್ಯಾಂಡ್ ಅರ್ಜಿಯಲ್ಲಿ ಸಂಪೂರ್ಣ ವಿವರವನ್ನು ದಾಖಲಿಸುವುದು ಪೊಲೀಸರ ಕರ್ತವ್ಯ. ಆದರೆ ಈ ಪ್ರಕರಣದಲ್ಲಿ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಜಾಮೀನು ಅರ್ಜಿ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net