ಅಪ್ರಾಪ್ತೆ ಮೇಲೆ ಅತ್ಯಾಚಾರ : ಬ್ಯಾಡ್ಮಿಂಟನ್ ತರಬೇತುದಾರನ ಸೆರೆ

suresh
Published on

ಬೆಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬ್ಯಾಡ್ಮಿಂಟನ್ ತರಬೇತುದಾರನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಸುರೇಶ್ ಬಾಲಾಜಿ(೨೬) ಬಂಧಿತ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ೮ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರೇಶ್ ಬಾಲಾಜಿ ಕೆಲ ವರ್ಷಗಳಿಂದ ಹುಳಿಮಾವು ಭಾಗದಲ್ಲಿ ನೆಲೆಸಿದ್ದ. ಸ್ಥಳೀಯ ಕ್ರೀಡಾ ಕೋಚಿಂಗ್ ಕೇಂದ್ರದಲ್ಲಿ ಬ್ಯಾಡ್ಮಿಂಟನ್ ಕೋಚ್ ಆಗಿ ಕೆಲಸ ಮಾಡುತ್ತಿದ್ದ. ಎರಡು ವರ್ಷದ ಹಿಂದೆ ಬಾಲಕಿ ಬ್ಯಾಡ್ಮಿಂಟನ್ ತರಬೇತಿಗೆ ಸೇರಿಕೊಂಡಿದ್ದಳು. ಈ ವೇಳೆ ಆಕೆಯ ಜತೆಗೆ ಸಲುಗೆ ಬೆಳೆಸಿದ್ದ ಆರೋಪಿಯು ಆಗಾಗ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಅಲ್ಲದೇ ಬಾಲಕಿಯ ನಗ್ನ ಚಿತ್ರಗಳನ್ನು ಫೋಟೋ ಕ್ಲಿಕ್ಕಿಸಿಕೊಂಡಿದ್ದ.

ನಗ್ನ ಫೋಟೋಗಳು ಅಜ್ಜಿಯ ಮೊಬೈಲ್‌ಗೆ ರವಾನೆ:

ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ತೆ ಪರೀಕ್ಷೆ ಮುಗಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಳು. ರಜೆ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ತೆರಳಿದ್ದಳು. ಈ ವೇಳೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಅಜ್ಜಿಯ ಮೊಬೈಲ್‌ಗೆ ಮೊಮ್ಮಗಳ ನಗ್ನ ಫೋಟೋಗಳು ಬಂದಿದ್ದವು. ಅದನ್ನು ನೋಡಿರುವ ಅಜ್ಜಿ, ಸಂತ್ರಸ್ತೆಯ ಪಾಲಕರಿಗೆ ವಿಷಯ ತಿಳಿಸಿದ್ದರು. ಬಳಿಕ ಸಂತ್ರಸ್ತೆಯ ತಾಯಿ ವಿಚಾರಿಸಿದಾಗ ಬ್ಯಾಡ್ಮಿಂಟನ್ ತರಬೇತುದಾರ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸೆಗಿದ್ದ ವಿಚಾರವನ್ನು ಹೇಳಿಕೊಂಡಿದ್ದಳು. ಬಳಿಕ ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ತರಬೇತಿಗೆ ಬರುತ್ತಿದ್ದಾಗ ಬಾಲಕಿಯ ಸ್ನೇಹ ಸಂಪಾದಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಹಲವು ಬಾರಿ ಆಕೆ ನೃತ್ಯ ತರಬೇತಿ ಹಾಗೂ ಟ್ಯೂಷನ್‌ಗೆ ಹೋದಾಗಲು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ವಿಡಿಯೋ ಮಾಡಿಕೊಂಡು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಹೀಗಾಗಿ ಸಂತ್ರಸ್ತೆ ಭಯದಿಂದ ದೌರ್ಜನ್ಯದ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ ಎಂದು ತಿಳಿದು ಬಂದಿದೆ.

ಆರೋಪಿ ಬಳಿ ಹಲವು ವಿಡಿಯೋ ಪತ್ತೆ:

ಆರೋಪಿ ಸುರೇಶ್ ಬಾಲಾಜಿ ಬ್ಯಾಡ್ಮಿಂಟನ್ ತರಬೇತಿಗೆ ಬರುತ್ತಿದ್ದ ಬಾಲಕಿಯರ ಬಳಿ ಸಲಿಗೆ ಬೆಳೆಸಿ ಬಳಿಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ. ಈ ವಿಚಾರ ಯಾರ ಬಳಿಯೂ ಹೇಳದಂತೆ ಬೆದರಿಸುತ್ತಿದ್ದ. ಬಳಿಕ ಆ ವಿಡಿಯೋ ಇರಿಸಿಕೊಂಡು ಹಲವು ಬಾರಿ ದೌರ್ಜನ್ಯ ಎಸಗುತ್ತಿದ್ದ. ಆರೋಪಿಯ ಮೊಬೈಲ್‌ನಲ್ಲಿ ಐದಾರು ಮಂದಿ ಅಪ್ರಾಪ್ತೆಯರ ನಗ್ನ ವಿಡಿಯೋಗಳು ಹಾಗೂ ಪೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಹುಳಿಮಾವು ಠಾಣೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net