Amri - ಅಮೃತಾ ಶೇರ್ಗಿಲ್ ಬಯೋಪಿಕ್​ನಲ್ಲಿ ಬ್ಯಾಡ್​ ಗರ್ಲ್​ ಅಂಜಲಿ ಶಿವರಾಮನ್​

ಅಮ್ರಿ
ಅಮ್ರಿ
Published on
Amri -
ಹಿರಿಯ ನಿರ್ದೇಶಕಿ ಮೀರಾ ನಾಯರ್​ ಸಿನಿಮಾ ನಿರ್ದೇಶನಕ್ಕೆ ಮರಳಿದ್ದಾರೆ. 2016ರಲ್ಲಿ "ಕ್ವೀನ್​ ಆಫ್​ ಕಾತ್ವೆ' ನಿರ್ದೇಶಿಸಿದ್ದ ಅವರು 2020ರಲ್ಲಿ "ಎ ಸೂಟಬಲ್​ ಬಾಯ್​' ಎಂಬ ಸರಣಿಗೆ ಆ್ಯಕ್ಷನ್​-ಕಟ್​ ಹೇಳಿದ್ದರು. ಆದರೆ, "ಸಲಾಂ ಬಾಂಬೆ' ಖ್ಯಾತಿಯ ನಿರ್ದೇಶಕಿ ಇದೀಗ ದಶಕದ ಬಳಿಕ ಮತ್ತೆ ಸಿನಿಮಾ ನಿರ್ದೇಶಿಸಲು ಸಿದ್ಧತೆ ನಡೆಸಿದ್ದಾರೆ. ಭಾರತ - ಹಂಗೇರಿಯನ್​ ಮೂಲದ ಹೆಸರಾಂತ ಕುಂಚ ಕಲಾವಿದೆ ಅಮೃತಾ ಶೇರ್​ಗಿಲ್​ ಬಯೋಪಿಕ್​ ಮಾಡಲು ಮೀರಾ ಮುಂದಾಗಿದ್ದಾರೆ. ಚಿತ್ರಕ್ಕೆ "ಅಮ್ರಿ' ಎಂದು ನಾಮಕರಣ ಮಾಡಲಾಗಿದೆ.
2020ರಲ್ಲೇ ಸಿನಿಮಾ ಘೋಷಿಸಿದ್ದರಾದರೂ, 2025ರವರೆಗೆ ಶೂಟಿಂಗ್​ ಪ್ರಾರಂಭಿಸಿರಲಿಲ್ಲ. ಅಮೃತಾ ಪಾತ್ರಕ್ಕೆ ನಟಿ ತಾನ್ಯಾ ಮಾನಿಕ್ತಲಾರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ, ತಾನ್ಯಾ ಕೆಲ ದಿನಗಳಲ್ಲೇ ತಂಡದಿಂದ ಹೊರನಡೆದ ಕಾರಣ, ಮೀರಾ ನಾಯಕಿಯ ಪಾತ್ರದ ಆಯ್ಕೆಯಲ್ಲಿ ಬಿಜಿಯಾಗಿದ್ದರು. ಕಳೆದ ವರ್ಷ ವಿವಾದಕ್ಕೀಡಾಗಿದ್ದ "ಬ್ಯಾಡ್​ ಗರ್ಲ್​' ಚಿತ್ರದ ನಟಿ ಅಂಜಲಿ ಶಿವರಾಮನ್​ರನ್ನು ಅಮೃತಾ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು, ಅವರು ಈಗಾಗಲೇ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಉಳಿದಂತ ಎಮಿಲಿ ವಾಟ್ಸನ್​, ಜೈದೀಪ್​ ಅಹ್ಲಾವತ್​, ಪ್ರಿಯಾಂಕಾ ಚೋಪ್ರಾ ಜೊನಾಸ್​, ಜಿಮ್​ ಸರ್ಭ್​ ಪ್ರಮುಖ ತಾರಾಗಣದಲ್ಲಿ ನಟಿಸಲಿದ್ದಾರೆ. ಅಮೃತ್ಸರ, ಫ್ರಾನ್ಸ್​​ ಮತ್ತು ಹಂಗೇರಿಯಲ್ಲಿ ಚಿತ್ರದ ಶೂಟಿಂಗ್​ ನಡೆಸಲು ಮೀರಾ ನಾಯರ್​ ಯೋಜಿಸಿದ್ದಾರೆ.

ಯಾರು ಅಮೃತಾ ಶೇರ್​ಗಿಲ್​?

ಅಮೃತಾ ಶೇರ್​ಗಿಲ್​ ಭಾರತ ಮೂಲದ ಹಂಗೇರಿ ಕುಂಚ ಕಲಾವಿದೆ. 1913ರಲ್ಲಿ ಜನಿಸಿದ ಅವರು 1941ರಲ್ಲಿ ಕೇವಲ 28ನೇ ವಯಸ್ಸಿನಲ್ಲೇ ವಿಧಿವಶರಾದರು. ಆದರೆ, ಸಣ್ಣ ವಯಸ್ಸಿಗೇ 20ನೇ ಶತಮಾನದ ಶ್ರೇಷ್ಠ ಕುಂಚ ಕಲಾವಿದೆಯರಲ್ಲಿ ಒಬ್ಬರಾಗಿ ಅಮೃತಾ ಕೂಡ ಸ್ಥಾನ ಪಡೆದಿದ್ದರು. ಏಷಿಯಾ ಮತ್ತು ಯೂರೋಪ್​ ಎರಡೂ ಪ್ರದೇಶಗಳ ಜನ-ಜೀವನದ ಅರವಿದ್ದ ಅವರು ಪ್ರಯೋಗಾತ್ಮಕ ಮತ್ತು ಆಧುನಿಕ ಕಲೆಗಳ ಮೂಲಕ ಹೆಸರುವಾಸಿಯಾಗಿದ್ದರು. ಈಗಲೂ ಅವರ ಪೇಂಟಿಂಗ್​ಗಳಿಗೆ ಹೆಚ್ಚು ಬೇಡಿಕೆಯಿದ್ದು, ಅವರು ರಚಿಸಿದ್ದ "ಸ್ಟೋರಿ ಟೆಲ್ಲರ್​' ಎಂಬ ಪೇಂಟಿಂಗ್​ 2023ರಲ್ಲಿ ಬರೋಬ್ಬರಿ <61.8 ಕೋಟಿಗೆ ಹರಾಜಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net