

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ಜಾತಿಗಳ ಜನಸಂಖ್ಯೆ ಪ್ರಕಾರ ಹೊಸ ಮೀಸಲು ವ್ಯವಸ್ಥೆ ರೂಪಿಸಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವ ಭೂಮಿಕೆ ಸಿದ್ಧವಾಗುತ್ತಿದೆ.
ಕಾಂತರಾಜು ನೇತೃತ್ವದ ಆಯೋಗವು ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದ್ದು, ಹಿಂದುಳಿದ ಜಾತಿಗಳ ಜನಗಣತಿ ವರದಿ ಎಂದೇ ಬಿಂಬಿತವಾಗಿದೆ. ಸದ್ಯಕ್ಕೆ ಈ ವರದಿ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದ ಇಲಾಖೆ ಅಧಿಕಾರಿ ಬಳಿಯಿದೆ. ರಾಜ್ಯ ತಿಗಳರ ಸಂಘದ ಸಮುದಾಯ ಭವನದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟ ಭಾನುವಾರ ಏರ್ಪಡಿಸಿದ್ದ ಸಮಾಲೋಚನೆ ಸಭೆಯಲ್ಲಿ ಈ ಬಗ್ಗೆ ಗಂಭೀರ ವಿಚಾರ-ವಿಮರ್ಶೆಯಾಯಿತು.
18ಕ್ಕೆ ತೀರ್ಮಾನ ಒಮ್ಮತದ ಅಭಿಪ್ರಾಯದೊಂದಿಗೆ ಮುಂದಿನ ನಡೆ, ಕಾರ್ಯಚಟುವಟಿಕೆ ರೂಪಿಸುವುದಕ್ಕಾಗಿ ಬೆಂಗಳೂರಿನಲ್ಲಿ ಅ.18ಕ್ಕೆ ಸಭೆ ಆಯೋಜಿಸಲು ತೀರ್ವನಿಸಿತು. ವಿವಿಧ ಮಠಾಧೀಶರು, ಗಣ್ಯರು, ಪ್ರಮುಖರು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ 198 ಸಮುದಾಯಗಳ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಹೋರಾಟಕ್ಕೆ ಇಳಿಯುವ ಮೊದಲು ಮುಖ್ಯಮಂತ್ರಿಗೆ ಭೇಟಿಯಾಗಿ ವರದಿ ಸ್ವೀಕರಿಸಿ, ಪರಿಶೀಲಿಸಲು ಮನವಿ ಮಾಡಬೇಕೆಂಬ ಸಲಹೆಗೆ ಸಹಮತ ವ್ಯಕ್ತವಾಯಿತು.
ಕಳವಳ
ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರಚಿತ ಎಚ್.ಕಾಂತರಾಜು ಅಧ್ಯಕ್ಷತೆಯ ಆಯೋಗವು ವಾಸ್ತವವಾಗಿ ರಾಜ್ಯದ ಪ್ರತಿಯೊಬ್ಬ ನಾಗರಿಕರ ಸ್ಥಿತಿಗತಿ ಸಮೀಕ್ಷೆ ನಡೆಸಿದೆ. ವೈಜ್ಞಾನಿಕ ನೆಲೆಯಲ್ಲಿ ದತ್ತಾಂಶಗಳನ್ನು ಸಂಗ್ರಹಿಸಿ ಸಮಗ್ರ ವರದಿಯನ್ನು ತಯಾರಿಸಿದೆ. ಆದರೆ ಹಿಂದುಳಿದ ಜಾತಿಗಳ ಜನಸಂಖ್ಯೆ ಆಧಾರಿತ ವರದಿ ಎಂಬ ತಪ್ಪು ಕಲ್ಪನೆಯಿದೆ. ಇದು, ಮೀಸಲು ಏರುಪೇರಾಗಲಿದೆ ಎಂಬ ಭೀತಿ, ಅನಗತ್ಯ ಗೊಂದಲ ಹುಟ್ಟು ಹಾಕಿದೆ ಎಂದು ಸಭೆ ತೀವ್ರ ಕಳವಳ ವ್ಯಕ್ತಪಡಿಸಿತು.
ಸುಪ್ರೀಂ ಕೋರ್ಟ್ ಆದೇಶದಂತೆ ರಚಿತ ಆಯೋಗವು 3-4 ವರ್ಷಗಳ ಕಾಲ ರಾಜ್ಯವನ್ನು ಸುತ್ತಿದೆ. ಸಮೀಕ್ಷೆಗಾಗಿ 1.88 ಲಕ್ಷ ಜನರು ಶ್ರಮಿಸಿದ್ದಾರೆ. ಸರ್ಕಾರದ ಬೊಕ್ಕಸದಿಂದ 162.77 ಕೋಟಿ ರೂ. ಖರ್ಚಾಗಿದೆ. ಇಷ್ಟೆಲ್ಲ ಪ್ರಯತ್ನ, ಪರಿಶ್ರಮದ ನಂತರವೂ ಆಯೋಗದ ವರದಿಯನ್ನು ಸರ್ಕಾರ ಕನಿಷ್ಟ ಪಕ್ಷ ಸ್ವೀಕರಿಸಿಲ್ಲ. ಶಾಶ್ವತವಾಗಿ ಉಳಿಯಬೇಕಾಗಿದ್ದ ಹಿಂದುಳಿದ ವರ್ಗಗಳ ಆಯೋಗವನ್ನು ರದ್ದು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಇನ್ನಾದರೂ ವಿಳಂಬ ಮಾಡದೆ ವರದಿ ಸ್ವೀಕರಿಸಿ, ಪರಿಶೀಲಿಸಬೇಕು. ಚರ್ಚೆಗೆ ಅವಕಾಶ ನೀಡಿದರೆ ನಿಜಾಂಶ ಜನರಿಗೂ ತಿಳಿದು, ಅನುಷ್ಠಾನಕ್ಕೆ ದಾರಿ ಸುಗಮವಾಗಲಿದೆ ಎಂದು ಸಭೆ ಒತ್ತಾಯಿಸಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ. ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಕೆ.ಪಿ.ನಂಜುಂಡಿ, ಪಿ.ಆರ್.ರಮೇಶ್, ಮಾಜಿ ಸಚಿವ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು, ಮಾಜಿ ಸದಸ್ಯ ಪ್ರೊ.ಬಿ.ಕೆ.ರವಿ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಮಾತನಾಡಿದರು. ವೆಂಕಟರಾಮೇಗೌಡ ಸ್ವಾಗತಿಸಿದರು. ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.