

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ) ಬಂಗಾಳ ಕೊಲ್ಲಿಯ ಮಹಾನದಿ ಮುಖಜಭೂಮಿಯಲ್ಲಿ ಒಂದರ ಹಿಂದೆ ಇನ್ನೊಂದು ಎನ್ನುವಂತೆ ಎರಡು ಮಹತ್ವದ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಪತ್ತೆ ಮಾಡಿದೆ. ಅಪಾಯವೊಡ್ಡುವ ಆಳ ನೀರಿನಲ್ಲಿ ಶೋಧದಿಂದ ಫಲ ದೊರಕುತ್ತದೆ ಎಂಬ ಲೆಕ್ಕಾಚಾರದಿಂದ ಒಎನ್ಜಿಸಿ ಈ ಸಾಹಸಕ್ಕೆ ಕೈ ಹಾಕಿದ್ದು ಅದಕ್ಕೆ ತಕ್ಕ ಪ್ರತಿಫಲ ದಕ್ಕಲು ಆರಂಭವಾಗಿದೆ.
2019ರಲ್ಲಿ ಎಕರೆವಾರು ಮುಕ್ತ ಲೈಸೆನ್ಸಿಂಗ್ ನೀತಿಯಡಿ ಮೂರನೇ ಸುತ್ತಿನ ಹರಾಜಿನಲ್ಲಿ ಪಡೆದಿದ್ದ ಎಂಎನ್-ಡಿಡಬ್ಲ್ಯುಎಚ್ಪಿ-2018/1 ಬ್ಲಾಕ್ನಲ್ಲಿ ಒಎನ್ಜಿಸಿ ಅನಿಲ ನಿಕ್ಷೇಪವನ್ನು ಶೋಧಿಸಿದೆ ಎಂದು ಈ ಬೆಳವಣಿಗೆ ಕುರಿತ ಎರಡು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಒಳಗೊಂಡಿರುವುದರಿಂದ ಹಿಂದೆ "ತೆರಳಲು ನಿಷೇಧವಿದ್ದ' ಪ್ರದೇಶಗಳಲ್ಲೇ ಈ ಶೋಧ ಕಾರ್ಯ ಯಶಸ್ವಿಯಾಗಿದೆ.
714 ಮೀಟರ್ ಜಲ ಆಳದಲ್ಲಿ ಉತ್ಕಲ್ ಎಂದು ಹೆಸರಿಸಲಾಗಿರುವ ಮೊದಲ ಅನ್ವೇಷಣೆಯಲ್ಲಿ ಆರಂಭಿಕ ಪರೀಕ್ಷೆಯಲ್ಲಿ ದೈನಿಕ 3 ಲಕ್ಷ ಕ್ಯೂಬಿಕ್ ಮೀಟರ್ ಅನಿಲ ಸಿಗಲಿದೆ ಎಂದು ತಿಳಿದು ಬಂದಿದೆ. ನೀರಿನ 1,100 ಮೀಟರ್ ಆಳದಲ್ಲಿ ಇನ್ನೊಂದು ಅನಿಲ ಸಂಗ್ರಹ ಪತ್ತೆಯಾಗಿದೆ ಎಂದು ಮೂಲಗಳು ವಿವರಿಸಿವೆ. ಈ ಶೋಧಗಳನ್ನು ಒಎನ್ಜಿಸಿ ಸಂಬಂಧಪಟ್ಟ ನಿಯಂತ್ರಣ ಸಂಸ್ಥೆಯಾದ ಹೈಡ್ರೋಕಾರ್ಬನ್ ಮಹಾ ನಿರ್ದೇಶನಾಲಯದ (ಡಿಜಿಎಚ್) ಅವಗಾಹನೆಗೆ ತಂದಿದೆ.
ನೈಸರ್ಗಿಕ ಅನಿಲದ ಬೇಡಿಕೆಯ ಅರ್ಧದಷ್ಟನ್ನು ಆಮದು ಮೂಲಕ ಪೂರೈಸಿಕೊಳ್ಳುತ್ತಿರುವ ಭಾರತಕ್ಕೆ ಹೊಸ ನಿಕ್ಷೇಪ ಪತ್ತೆ ಆಗಿರುವುದು ಇಂಧನ ಭದ್ರತೆ ವಿಚಾರದಲ್ಲಿ ಶುಭ ಸೂಚನೆಯಾಗಿದೆ. ಇಂಧನ ಕ್ಷೇತ್ರದಲ್ಲಿ ನೈಸರ್ಗಿಕ ಅನಿಲದ ಪಾಲನ್ನು 2030ರ ವೇಳೆಗೆ ಈಗಿನ ಶೇ.6.3ರಿಂದ ಶೇ. 15ಕ್ಕೆ ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ. ದೇಶೀಯವಾಗಿ ಹೆಚ್ಚು ಉತ್ಪಾದನೆ ಆ ಗುರಿ ಸಾಧನೆಯಲ್ಲಿ ನೆರವಾಗಲಿದೆ.