

ಮುಖ್ಯವಾಗಿ 11 ಜಿಲ್ಲೆಗಳ, ಹೊರರಾಜ್ಯದ ಸುಮಾರು 4.9 ಲಕ್ಷ ಆಜೀವ ಸದಸ್ಯರು ಡಿ.12ರಂದು ನಡೆಯುವ ಚುನಾವಣೆ ಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ ಒಟ್ಟು 35 ಸದಸ್ಯರುಗಳನ್ನು ಮುಂದಿನ ಐದು ವರ್ಷ ಅವಧಿಗೆ ಆಯ್ಕೆ ಮಾಡುತ್ತಾರೆ. ಡಿ.15ರಂದು ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಆಗಲಿದೆ.
ಒಕ್ಕಲಿಗರ ಸಂಘದ ಚುನಾವಣೆ ವಿಭಿನ್ನವಾಗಿ ನಡೆ ಯುತ್ತದೆ. ಜಿಲ್ಲೆ ಹಾಗೂ ಕೆಲವು ಜಿಲ್ಲೆಗಳ ಗುಂಪುಗಳನ್ನು ಆಧರಿಸಿ ನಿರ್ದೇಶಕರನ್ನು ನಿಗದಿ ಮಾಡಲಾಗಿರುತ್ತದೆ. ಉದಾಹರಣೆಗೆ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಸೇರಿಸಿ ಒಟ್ಟು 15 ಜನರನ್ನು ಆಯ್ಕೆ ಮಾಡಬೇಕಿದ್ದು, ಈ ಭಾಗದ ಪ್ರತಿ ಮತದಾರರೂ ತಲಾ 15 ಮತ ಚಲಾಯಿಸಬಹುದು. ಹೀಗೆ ಜಿಲ್ಲೆಗೆ ಅನುಗುಣವಾಗಿ ನಿರ್ದೇಶಕರ ಸಂಖ್ಯೆ, ಮತಗಳನ್ನು ಚಲಾಯಿಸಲು ಅವಕಾಶ ಇರುತ್ತದೆ. ಅನೇಕರು ಆಕಾಂಕ್ಷಿಗಳ ಗುಂಪನ್ನು (ಸಿಂಡಿಕೇಟ್)ರಚಿಸಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರೆ. ಸಾವಿರಾರು ಕೋಟಿ ರೂ. ಮೊತ್ತದ ಆಸ್ತಿ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಹೊಂದಿರುವ ಸಂಘಕ್ಕೆ ಆಯ್ಕೆಯಾಗಲು ಕೋಟ್ಯಂತರ ರೂ. ವೆಚ್ಚವನ್ನೂ ಮಾಡಲಾಗುತ್ತದೆ. ಸಾಂಪ್ರದಾಯಿಕವಾಗಿ ಜೆಡಿಎಸ್, ಕಾಂಗ್ರೆಸ್ ತಮ್ಮ ಕೆಲವು ನಾಯಕರ ಮೂಲಕ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಪಾತ್ರ ವಹಿಸುತ್ತಿದ್ದವು. ಈ ಬಾರಿ ಬಿಜೆಪಿಯಿಂದ ಬೆಂಬಲಿತ ಸಿಂಡಿಕೇಟ್ ಪ್ರಚಾರ ಆರಂಭಿಸಿದೆ ಎನ್ನಲಾಗಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ.
ಇನ್ನೂ ಚುನಾವಣೆ ದಿನಾಂಕಗಳು ಘೋಷಣೆ ಯಾಗ ಬೇಕಿದ್ದರೂ, ಆಕಾಂಕ್ಷಿಗಳು ಚುನಾ ವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸದ್ಯ ಮೂವರು ಅಭ್ಯರ್ಥಿಗಳು ಪ್ರಚಾರ ಕಣದಲ್ಲಿದ್ದು, ಚುನಾವಣೆ ಘೊಷಣೆ ಆದ ನಂತರ ಹೆಚ್ಚುವ ಸಾಧ್ಯತೆಯಿದೆ. ಸಾಂಸ್ಥಿಕ ಸ್ವರೂಪದಲ್ಲಿ ಬದಲಾವಣೆ, ಮತ್ತಷ್ಟು ಪ್ರಮಾಣದಲ್ಲಿ ಸಮುದಾಯವನ್ನು ಒಳಗೊಳ್ಳುವಿಕೆ, ಸಮುದಾಯದ ಅಶಕ್ತರಿಗೆ ನೆರವಿನಂತಹ ಘೊಷಣೆಗಳು ಕೇಳಿಬರುತ್ತಿವೆ. ಈ ನಡುವೆ ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರಿ ಮತ್ತು ವಸಿಷ್ಠ ಬ್ಯಾಂಕ್ಗಳ ವಿಚಾರ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ಬ್ಯಾಂಕ್ಗಳ ವ್ಯವಹಾರದಲ್ಲಿ ಮಹಾಸಭಾದ ನಿಕಟಪೂರ್ವ ಅಧ್ಯಕ್ಷರ ಹೆಸರು ತಳುಕು ಹಾಕಿಕೊಂಡಿರುವುದರಿಂದ, ಅವರ ರಕ್ಷಣೆಗೆ ಒಂದು ಗುಂಪು ಕೆಲಸ ಮಾಡುತ್ತಿದೆ ಎಂಬ ಆರೋಪ ಮತ್ತೊಂದು ಗುಂಪಿನಿಂದ ಕೇಳಿಬರುತ್ತಿದೆ.
ಬೆಂಗಳೂರಿನಲ್ಲೆ ಅತಿ ಹೆಚ್ಚು ಮತದಾರರಿರುವ ಕಾರಣಕ್ಕೆ ಈ ವಿಷಯ ಪ್ರಭಾವ ಬೀರುವ ಸಾಧ್ಯತೆ ಇದೆ. ಅಭ್ಯರ್ಥಿಗಳ ಪರವಾಗಿ ಚಲನಚಿತ್ರ ಕಲಾವಿದರು, ನಿವೃತ್ತ ನ್ಯಾಯಮೂರ್ತಿಗಳು, ಶಾಸಕರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಸೇರಿ ಅನೇಕರು ಭಾಗವಹಿಸುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪರೋಕ್ಷ ಪ್ರಭಾವವನ್ನೂ ಕಾಣಬಹುದಾಗಿದೆ.