

ಬೆಂಗಳೂರು: ಲೋಕಸಭೆ, ಬಿಬಿಎಂಪಿ ಹಾಗೂ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ತಯಾರಿಗೆ ಕಾಂಗ್ರೆಸ್ ಇನ್ನಿಲ್ಲದ ವೇಗ ನೀಡಿದ್ದು, ಬಿಜೆಪಿ ಮತ್ತು ಜೆಡಿಎಸ್ನಲ್ಲಿರುವ ಪ್ರಭಾವಿಗಳನ್ನು ತೆಕ್ಕೆಗೆ ಸೆಳೆದುಕೊಳ್ಳುವ ಚಟುವಟಿಕೆಯನ್ನು ತೀವ್ರಗೊಳಿಸಿದೆ. ಇನ್ನೊಂದೆಡೆ ಕಾಂಗ್ರೆಸ್ನೊಳಗಿನ ಅಸಹನೆ, ಅಸಹಕಾರದ ಮೊಗ್ಗು ಕೂಡ ಅರಳಲಾರಂಭವಾಗಿದೆ.
ವಿಧಾನಸಭೆ ಚುನಾವಣೆ ಯಲ್ಲಿ ಮಕಾಡೆ ಮಲಗಿರುವ ಎದುರಾಳಿಗಳ ಬಲವನ್ನು ಮತ್ತಷ್ಟು ಕುಗ್ಗಿಸುವ ರಣತಂತ್ರಕ್ಕೆ ಕೈ ನಾಯಕರು ಮೊರೆಹೋಗಿದ್ದು, ಇದರ ಭಾಗವಾಗಿಯೇ ಹಾಲಿ ಹಾಗೂ ಮಾಜಿ ಶಾಸಕರ ಬೇಟೆಗೆ ಇಳಿದಿದೆ. ಭಾನುವಾರದ ಬೆಳವಣಿಗೆಯಲ್ಲಿ ಯಶ ವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಮನೆಗೆ ಕರೆಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ, ಇತ್ತೀಚಿನ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸಭೆ ಬಳಿಕ ಕ್ಷೇತ್ರದ ವಿಚಾರವಾಗಿ ಚರ್ಚೆ ನಡೆಸಲಾಗಿದೆ ಎಂದು ಸೋಮಶೇಖರ್ ಹೇಳಿದ್ದರೂ ಪಕ್ಷಾಂತರ ಕುರಿತೇ ಚರ್ಚೆಯಾಗಿದೆ ಎಂಬುದು ಸರ್ವವಿಧಿತ. ಸೋಮಶೇಖರ್ ಪಕ್ಷಾಂತರದಿಂದ ಕಾಂಗ್ರೆಸ್ಗೆ ಸಹಜ ವಾಗಿ ಬಿಬಿಎಂಪಿ ಮತ್ತು ನಂತರ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಲ ಸಿಗಲಿದೆ. ಸೋಮಶೇಖರ್ ಪಕ್ಷ ಮೀರಿ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಅವರ ಬಲವನ್ನು ಬಿಜೆಪಿಯಿಂದ ಕಸಿದರೆ ತನಗೆ ಲಾಭವಾಗಲಿದೆ ಎಂದು ಕಾಂಗ್ರೆಸ್ ಆಶಿಸಿದೆ.
ಇದೇ ರೀತಿ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕೂಡ ದೂರಗಾಮಿ ಆಲೋಚನೆಯಲ್ಲಿ ಕಾಂಗ್ರೆಸ್ನ ಆಹ್ವಾನಕ್ಕೆ ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ, ಮಾಜಿ ಸಂಸದ ಆಯನೂರು ಮಂಜುನಾಥ್ ಕಾಂಗ್ರೆಸ್ ಪಾಳೆಯಕ್ಕೆ ಜಿಗಿಯುವುದು ನಿಚ್ಚಳವಾಗಿದ್ದು, ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿಮಾಡಿ ಚರ್ಚೆ ನಡೆಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯವನ್ನು ಬಿಜೆಪಿಯಿಂದ ದೂರ ಮಾಡುವ ವಿಶೇಷ ಕಾರ್ಯಾಚರಣೆಯನ್ನು ಲೋಕಸಭೆ ಚುನಾವಣೆ ಉದ್ದೇಶದಲ್ಲಿ ಮುಂದುವರಿಸಿರುವ ಕಾಂಗ್ರೆಸ್ನ ಗಾಳಕ್ಕೆ ಆಯನೂರು ಮಂಜುನಾಥ್ ಕೂಡ ಅನಾಯಾಸವಾಗಿ ಸಿಕ್ಕಿಹೋಗಿದ್ದಾರೆ. ಆಯನೂರು ಮಂಜುನಾಥ್ ಜತೆ ದೊಡ್ಡ ಮತ ಬ್ಯಾಂಕ್ ಇಲ್ಲದಿರಬಹುದು. ಆದರೂ ಆ ಸಮುದಾಯದ ನಾಯಕರೊಬ್ಬರು ಕಾಂಗ್ರೆಸ್ ಸೇರಿದರು ಎಂಬ ಸಂದೇಶ ಹೋಗಲಿದೆ.
ಶತ್ರುಗಳಂತೆ ನೋಡ್ತಾರೆ!: ಸರ್ಕಾರದ ಆಡಳಿತ ಯಂತ್ರದ ಬಗ್ಗೆ ಎರಡು ವಾರದ ಹಿಂದಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಮುನಿಸು ಹೊರಹಾಕಿ ಗಮನ ಸೆಳೆದಿದ್ದರು. ಈಗ ಮತ್ತೆ ತಮ್ಮ ಖಾರವಾದ ಅಭಿಪ್ರಾಯ ಹೊರಹಾಕಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದಲ್ಲಿ ಕೇವಲ ಒಂದು ಪ್ರಬಲ ಜಾತಿಯವರನ್ನ ಗುರುತಿಸಿ ಅಧಿಕಾರ ಕೊಡುವುದಲ್ಲ. ಹಿಂದುಳಿದ ವರ್ಗ ಅಂದರೆ ಒಂದು ಜಾತಿಯಲ್ಲ, ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗಬೇಕು, ಇಲ್ಲ ಅಂದರೆ ಮನೆಗೆ ಕಳಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ದೇವರಾಜ ಅರಸು ಕಾಲದಲ್ಲಿ ನಾವು ವಿರೋಧಿ ಬಣದಲ್ಲಿದ್ದವರು. ಆದರೂ ಅರಸು ನಮ್ಮನ್ನು ಕರೆದು ಮಾತನಾಡಿಸುತ್ತಿದ್ದರು. ನೀವು ಕಪಿಗಳು, ಕಪಿಚೇಷ್ಠೆ ಮಾಡುತ್ತಿದ್ದೀರಾ. ಆದರೂ ನಾನು ನಿಮ್ಮನ್ನು ರಕ್ಷಣೆ ಮಾಡ್ತೇನೆ ಎಂದು ಹೇಳುತ್ತಿದ್ದರು. ಈಗ ಕರೆದು ಮಾತಾಡುವುದು ಇರಲಿ, ವಿರೋಧಿಸುವವರನ್ನು ಶತ್ರುಗಳಂತೆ ನೋಡುತ್ತಾರೆ ಎಂದು ತಮ್ಮ ಅಸಹನೆ ಹೊರಹಾಕಿದರಲ್ಲದೇ, ತಮ್ಮ ಮಾತಿನ ಬಾಣ ಸಿಎಂ ಸಿದ್ದರಾಮಯ್ಯಗೆ ನಾಟುವಂತೆ ನೋಡಿಕೊಂಡರು.
ಸಿಎಂ ಆಸೆ ಒಪ್ಪಿದ ಪರಂ: ಮುಖ್ಯಮಂತ್ರಿ ಹುದ್ದೆಗೆ ನಾನೂ ಅರ್ಹ ಎಂದು ಅನೌಪಚಾರಿಕ ಚರ್ಚೆ ವೇಳೆ ಹೇಳಿಕೊಂಡೇ ಬಂದಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ ಭಾನುವಾರ ಬಹಿರಂಗವಾಗಿ ತಮ್ಮಅಪೇಕ್ಷೆ ಹೊರಹಾಕಿದ್ದಾರೆ. ಹೊಸ ಸರ್ಕಾರದಲ್ಲಿ ಪವರ್ ಶೇರಿಂಗ್ ವಿಚಾರ ಬೂದಿಮುಚ್ಚಿದ ಕೆಂಡದಂತಿರುವಾಗ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ನೂತನವಾಗಿ ಆಯ್ಕೆಯಾಗಿರುವ ಸಚಿವರು ಹಾಗೂ ಶಾಸಕರಿಗೆ ತುಮಕೂರು ಜಿಲ್ಲಾ ಸಹಕಾರಿಗಳು ಹಮ್ಮಿಕೊಂಡ ಅಭಿನಂದನಾ ಸಮಾರಂಭದ ವೇದಿಕೆಯಲ್ಲಿ, ಮುಖ್ಯಮಂತ್ರಿ ಆಗುವ ಆಸೆ ಇದೆಯೇ ಎಂಬ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಪ್ರಶ್ನೆಗೆ ಪರಮೇಶ್ವರ್ ‘ಇದೆ... ಇದೆ...’ ನಗುನಗುತ್ತ ತಲೆಯಾಡಿಸಿದರು. ನಾನು ಮುಂದೆ ಚುನಾವಣೆಗೆ ನಿಲ್ಲಬಾರದು ಅಂದುಕೊಂಡಿದ್ದೇನೆ. ಜಯಚಂದ್ರ, ಬಸವರಾಜು ಸಹ ಬಹುಶಃ ನಿಲ್ಲುವುದಿಲ್ಲ. ಆದರೆ ಡಾಕ್ಟರಿಗೆ (ಪರಮೇಶ್ವರ್) ಮುಖ್ಯಮಂತ್ರಿ ಆಗುವ ಆಸೆ ಇದೆ. ಹೀಗಾಗಿ ಅವರು ನಿಲ್ಲಬಹುದು. ಇದಕ್ಕೆ ನನ್ನ, ಜಯಣ್ಣನ, ಷಡಕ್ಷರಿ ಎಲ್ಲರ ಸಹಕಾರ ಇರುತ್ತದೆ ಎಂಬ ರಾಜಣ್ಣ ಹೇಳಿಕೆ ಸಹ ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ಕಿತ್ತಾಡುವವರನ್ನು ಕೂಡಿಸಲು ಮುಂದಾದ ಬಿಜೆಪಿ: ‘ವಿಳಂಬ ನಿಲುವು’ ಪಕ್ಷಕ್ಕೆ ದುಬಾರಿ ಎಂದು ಅರಿತ ಬಿಜೆಪಿ ವರಿಷ್ಠರು, ಮನವೊಲಿಕೆ ಜವಾಬ್ದಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಒಪ್ಪಿಸಿದ್ದಾರೆ. ಮನವೊಲಿಕೆ ಪ್ರಯತ್ನ, ನಡೆದ ಚರ್ಚೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರಿಷ್ಠರಿಗೆ ತಮ್ಮ ಅಭಿಪ್ರಾಯಸಹಿತ ಮಾಹಿತಿ ರವಾನಿಸಿದ್ದಾರೆ. ಬಹಿರಂಗ ಹೇಳಿಕೆ, ಅಸಮಾಧಾನ ಹೊರ ಹಾಕಿದವರಿಗೆ ವರಿಷ್ಠರ ಸೂಚನೆಯಂತೆ ಮೊದಲ ಆದ್ಯತೆ ನೀಡಿ ಪ್ರಲ್ಹಾದ ಜೋಶಿ ಬುಲಾವ್ ಕಳುಹಿಸಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಪ್ರಭು ಚವ್ಹಾಣ್ ನಡುವಿನ ವಿರಸ ಶಮನಕ್ಕೆ ಮುಂದಾಗಿದ್ದಾರೆ. ಖೂಬಾ, ಚವ್ಹಾಣ್ ಜತೆಗೆ ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ಗೂ ಆಹ್ವಾನಿಸಿದ್ದು, ಬಿಎಸ್ವೈ ಅಪೇಕ್ಷೆಯಂತೆ ಜೋಶಿ ಪ್ರತ್ಯೇಕವಾಗಿ ಸೋಮವಾರ ಮಾತುಕತೆ ನಡೆಸಲಿದ್ದಾರೆ. ಇನ್ನೊಂದೆಡೆ, ಸೋಮಶೇಖರ್ ಬೇಡಿಕೆಯಂತೆ ಯಶವಂತಪುರದ ಕೆಲ ನಾಯಕರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ.
ನನಗೆ ಕಾಂಗ್ರೆಸ್ ಸೇರಿ ಇತರ ಪಕ್ಷಗಳಿಂದ ಆಹ್ವಾನ ಬಂದಿದೆ. ಮನಸ್ಸಿಗೆ ನೋವಾಗಿರುವುದರಿಂದ ಸದ್ಯ ಬಿಜೆಪಿಯಲ್ಲಿದ್ದರೂ ತಟಸ್ಥನಾಗಿದ್ದೇನೆ. ನನ್ನನ್ನು ಪಕ್ಷದ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲ. ಇದು ದುರದೃಷ್ಟಕರ. ಚುನಾವಣೆಯಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. | ನೆಹರು ಓಲೇಕಾರ, ಮಾಜಿ ಶಾಸಕ
ಮಾಜಿಗಳಿಗೂ ಕೈ ಗಾಳ: ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ ಅಭ್ಯರ್ಥಿಗಳ ಪೈಕಿ ಯಾರು ತನ್ನ ಕಡೆ ವಾಲುವ ಮನಸ್ಥಿತಿಯಲ್ಲಿದ್ದಾರೆ ಎಂಬುದನ್ನು ಗಮನಿಸಿ, ಅವರಿಗೆ ಬಲೆ ಬೀಸಿರುವ ಕಾಂಗ್ರೆಸ್ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿಕೊಂಡಿದೆ. ಬಿಜೆಪಿ, ಜೆಡಿಎಸ್ನಲ್ಲಿ ಕಡೆಗಣನೆಗೆ ಒಳಗಾಗಿರುವವರ ಪೈಕಿ ತನಗೆ ಅನುಕೂಲವಾಗುವವರನ್ನು ಪಕ್ಷಕ್ಕೆ ಕರೆತಂದು ಅವರ ಸಣ್ಣಪುಟ್ಟ ಬೇಡಿಕೆ ಈಡೇರಿಸಿದರೆ ತನ್ನ ಅಭ್ಯರ್ಥಿಗಳ ಗೆಲುವಿಗೆ ಅನುಕೂಲ ಎಂಬ ಲೆಕ್ಕಾಚಾರ ಕಾಂಗ್ರೆಸ್ನದು. ದಾಸರಹಳ್ಳಿಯ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಂಜುನಾಥ್, ಬಿಜೆಪಿ ಹಾಲಿ ಸಂಸದ ಕರಡಿ ಸಂಗಣ್ಣ, ಮಾಜಿ ಸಚಿವ ಎಂ.ಪಿ. ಕುಮಾರಸ್ವಾಮಿ, ಮತ್ತೊಬ್ಬ ಮಾಜಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ... ಇವೆಲ್ಲ ಕಾಂಗ್ರೆಸ್ ಚಾವಡಿಯಲ್ಲಿ ಚರ್ಚೆಯಲ್ಲಿರುವ ಹೆಸರುಗಳು.
2. ಆಡಳಿತ ಯಂತ್ರದ ವಿಳಂಬ, ಓರೆಕೋರೆಯು ಸಾರ್ವಜನಿಕವಾಗಿ ಚರ್ಚೆಯಾಗುವುದನ್ನು ತಪ್ಪಿಸಲು, ಪ್ರತಿಪಕ್ಷಕ್ಕೆ ಈ ಬೆಳವಣಿಗೆ ಆಹಾರ ವಾಗುವುದನ್ನು ತಪ್ಪಿಸಲು ಈ ತಂತ್ರ.
3. ಪಕ್ಷಕ್ಕೆ ಬರುವವರು ಸಣ್ಣಪುಟ್ಟ ಬೇಡಿಕೆಗೆ ಒಪ್ಪಿಬಿಡುವ ಸಾಧ್ಯತೆ ಹೆಚ್ಚು. ವರ್ಗಾವಣೆ, ತನಿಖೆಗಳಂತಹ ಕುಣಿಕೆಯಿಂದ ತಪ್ಪಿಸುವುದು. ಇದಕ್ಕೆ ಒಪ್ಪಿದರೆ ಲಾಭ ಹೆಚ್ಚು.
4. ಸ್ಥಳೀಯವಾಗಿರುವ ಸಮುದಾಯ ವಾರು ನಾಯಕತ್ವಗಳು ಪರಿಣಾಮ ಕಾರಿ, ಅವುಗಳನ್ನು ಸೆಳೆದುಕೊಂಡರೆ ಎದುರಾಳಿಗೆ ಪೆಟ್ಟುಕೊಟ್ಟಂತೆ.
5. ವಿಧಾನಸಭೆ ಚುನಾವಣೆ ಪೂರ್ವ ಪ್ರಭಾವಿಗಳನ್ನು ತನ್ನೆಡೆಗೆ ಸೆಳೆದು ಕೊಂಡು, ಕಾಂಗ್ರೆಸ್ ಪರ ಅಲೆಯಿದೆ ಎಂದು ಬಿಂಬಿಸಿತ್ತು, ಈಗಲೂ ಮತ್ತದೇ ತಂತ್ರ ಪ್ರಯೋಗಿಸಲು ಮುಂದಾಗಿದೆ.