

ಕೋಲಾರ : ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಾಟ ಮಾಡಲಾಗಿದ್ದ ಮಗುವನ್ನು ರಕ್ಷಿಸಲಾಗಿದ್ದು, ಮಗುವನ್ನು ಪಡೆದಿದ್ದ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಮತ್ತು ಮಾರಾಟವಾದ ಹೆಣ್ಣು ಶಿಶುವನ್ನು ಪುಷ್ಪಾ ಅವರ ಸ್ನೇಹಿತೆ ಮಾಲೂರು ತಾಲೂಕಿನ ಹುಂಗೇನಹಳ್ಳಿ ನಿವಾಸಿ ನಾಗಮಣಿ ಅವರ ವಶದಿಂದ ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪೊಲೀಸರು ನೀಡಿದ್ದರು. ಮಗುವನ್ನು ಜಿಲ್ಲಾ ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿ ಆರೈಕೆ ಮುಂದುವರಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ನಾಗಮಣಿ ಹಾಗೂ ಸೋದರತ್ತೆ ಅನಸೂಯಮ್ಮ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಿ. ಡೆಕ್ಕಾ ಕಿಶೋರ್‌ಬಾಬು ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಗೀತಾ ನಾಪತ್ತೆಯಾಗಿದ್ದು, ತಲಾಶೆ ಮುಂದುವರಿದಿದೆ.
ಪ್ರಕರಣದ ಹಿನ್ನೆಲೆ: ಮೂಲತಃ ತಮಿಳುನಾಡು ಹೊಸೂರು ತಾಲೂಕು ಪೂನಹಳ್ಳಿ ನಿವಾಸಿ, ಈಗ ಕೋಲಾರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ವಾಸವಿರುವ ಸುಮಿತ್ರಾ ಮತ್ತು ಸತ್ಯ ದಂಪತಿಗಳಿಗೆ ಸೆ. 26ರಂದು ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಸುಮಿತ್ರ ತಂದೆಗೆ ಆರೋಗ್ಯ ಸರಿ ಇಲ್ಲದ ಕಾರಣ ಸುಮಿತ್ರಾ ಪತಿಯ ಸ್ನೇಹಿತ ಸೋಮಶೇಖರ್‌ನ ಪತ್ನಿ ಗೀತಾ ಅವರಿಗೆ ಮಗುವನ್ನು ಒಪ್ಪಿಸಿ ಎರಡ್ಮೂರು ದಿನ ನೋಡಿಕೊಳ್ಳಲು ತಿಳಿಸಿ ಅ.18ರಂದು ಮಗುವನ್ನು ಕೋಲಾರದ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಗೀತಾ ಮತ್ತು ಪುಷ್ಪಾ ಅವರಿಗೆ ನೀಡಿ ಸುಮಿತ್ರಾ ತಂದೆಯ ವಾಸಸ್ಥಳಕ್ಕೆ ಹೋಗಿದ್ದರು. ವಾಪಸ್ ಬಂದ ನಂತರ ಗೀತಾಳ ಬಳಿ ಮಗು ಕೇಳಿದಾಗ ನೀಡಿರಲಿಲ್ಲ.
ಈ ಸಂಬಂಧ ಶಿಶುವನ್ನು ಗೀತಾ ಹಾಗೂ ಪುಷ್ಪಾ ಅಪಹರಿಸಿದ್ದಾರೆ ಎಂದು ಆರೋಪಿಸಿ ಸುಮಿತ್ರಾ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ನ.2ರಂದು ದೂರು ದಾಖಲಿಸಿದ್ದರು. ಪೊಲೀಸರು ಪುಷ್ಪಾ ಮತ್ತು ಗೀತಾ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಲ್ಲದೆ ವಾರದೊಳಗೆ ಮಗುವನ್ನು ತಂದು ಒಪ್ಪಿಸುವಂತೆ ತಾಕೀತು ಮಾಡಿದ್ದರು. ಇದರಿಂದ ಆತಂಕಗೊಂಡಿದ್ದ ಪುಷ್ಪಾ ಮತ್ತು ಕುಟುಂಬ ಸದಸ್ಯರು ಮರ್ಯಾದೆಗೆ ಅಂಜಿ ನ.7ರಂದು ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಮಗುವಿನ ಬಗ್ಗೆ ಯಾವುದೇ ಸುಳಿವು ಸಿಗದೆ ಪ್ರಕರಣ ಪೊಲೀಸರಿಗೆ ಜಟಿಲವಾಗಿತ್ತು. ಮೃತರ ಹಾಗೂ ನಾಗಮಣಿ ಅವರ ಮೊಬೈಲ್ ಕರೆ ಮಾಹಿತಿ ಆಧರಿಸಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಗು ಸಂರಕ್ಷಿಸಲ್ಪಟ್ಟಿರುವ ವಿಷಯ ತಿಳಿದ ಪಾಲಕರು ಊರಿನಿಂದ ಬಂದಿದ್ದು, ಮಗು ತಮ್ಮದು ಎಂಬುದಕ್ಕೆ ಮಕ್ಕಳ ಕಲ್ಯಾಣ ಸಮಿತಿ ಎದುರು ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಬೇಕಿದೆ. ಸಮಿತಿ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ.
ಸಂರಕ್ಷಿಸಲ್ಪಟ್ಟ ಮಗುವನ್ನು ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಆರೋಗ್ಯದ ಮೇಲೆ ನಿಗಾವಹಿಸಿ ಆರೈಕೆ ಮಾಡಲಾಗಿದೆ. ಗುರುವಾರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಸಮಿತಿ ತೀರ್ಮಾನದಂತೆ ಮುಂದಿನ ಕ್ರಮ ವಹಿಸಲಾಗುವುದು. ಎಂ. ರಮೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಕೋಲಾರ