ಹೆಣ್ಣು ಮಗುವಿಗೆ ಬಾಲ! 2 ಇಂಚು ಉದ್ದದ ಬಾಲದೊಂದಿಗೆ ಜನಿಸಿದ ಕಂದಮ್ಮ, ಮೆಕ್ಸಿಕೋದಲ್ಲಿ ಅಪರೂಪದ ಪ್ರಕರಣ

baby
Published on

ಮೆಕ್ಸಿಕೊ ಸಿಟಿ: ಪ್ರಾಣಿಗಳಿಗೆ ಬಾಲ ಇರೋದು ಗೊತ್ತು, ಆದರೆ, ಮಗುವಿಗೂ ಬಾಲ ಇರೋದನ್ನು ಕೇಳಿದ್ದೀರಾ?

ಹೌದು, ಇಲ್ಲೊಂದು ಮಗುವಿಗೆ ಹುಟ್ಟುತ್ತಲೇ ಬಾಲ ಇದೆ. ಅರೆ, ಇದ್ಹೇನಿದು ಮಗುವಿಗೆ ಬಾಲವೇ? ಎಂದು ಆಶ್ಚರ್ಯ ಮೂಡೋದು ಗ್ಯಾರಂಟಿ. ಇಂತಹ ಅಪರೂಪದ ಪ್ರಕರಣ ಮೆಕ್ಸಿಕೊ ನಗರದ ಸಂಭವಿಸಿದೆ.

ನ್ಯೂವೋ ಲಿಯಾನ್​ ಆಸ್ಪತ್ರೆಯಲ್ಲಿ ಹೆಣ್ಣು ಮಗುವೊಂದು 2 ಇಂಚು ಉದ್ದದ ಬಾಲದೊಂದಿಗೆ ಜನಿಸಿದ್ದು, ಶಸ್ತ್ರಚಿಕಿತ್ಸೆ ಮಾಡಿ ಆ ಬಾಲವನ್ನು ತೆಗೆಯಲಾಗಿದೆ.

ಬಾಲವು 5.7 ಸೆಂ.ಮೀಟರ್​ ಉದ್ದವಿದ್ದು, ಮೃದುವಾಗಿತ್ತು. ಬಾಲದಲ್ಲಿ ಕೂದಲಿದ್ದು, ತುದಿಯ ಕಡೆಗೆ ಕಿರಿದಾಗುತ್ತಾ ವ್ಯಾಸದಲ್ಲಿ 3ಎಂಎಂ ಮತ್ತು 5 ಎಂಎಂ ನಡುವೆ ಇತ್ತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ.

ಇದು ಸ್ನಾಯು, ರಕ್ತನಾಳಗಳು ಮತ್ತು ನರಗಳನ್ನು ಒಳಗೊಂಡಿರುವ ನಿಜವಾದ ಬಾಲ. ಪ್ರಾಣಿಗಳ ರೀತಿ ಬಾಲದಲ್ಲಿ ಯಾವುದೇ ಮೂಳೆಗಳಿಲ್ಲ. ಬಹುಶಃ ಗರ್ಭಾಶಯದಲ್ಲಿ ಬೆಳವಣಿಗೆಯಾಗುವಾಗ ಭ್ರೂಣದ ಬಾಲದಿಂದ ಬಾಲವು ಹೊರಹೊಮ್ಮಿದೆ ಎಂದು ಭಾವಿಸಲಾಗಿದೆ. ಆದರೆ ಸಾಮಾನ್ಯವಾಗಿ ಮೂಳೆಯನ್ನು ರೂಪಿಸಲು ದೇಹ ಭ್ರೂಣದ ಬಾಲವನ್ನು ಪುನಃ ಒಳಕ್ಕೆಳೆದುಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಮೆಕ್ಸಿಕೊದಲ್ಲಿ ಈ ರೀತಿಯ ಅಪರೂಪದ ಪ್ರಕರಣ ದಾಖಲಾಗಿರುವುದು ಇದೇ ಮೊದಲಾಗಿದ್ದರೆ, ವಿಶ್ವದೆಲ್ಲಡೆ 200ಕ್ಕಿಂತ ಕಡಿಮೆ ಬಾರಿ ಈ ರೀತಿಯ ಪ್ರಕರಣ ದಾಖಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net