

ವಿಜಯಪುರ: ಹೃದಯ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರ ಚಿನ್ನದ ಸರ ಕಳ್ಳತನವಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಿಕಿತ್ಸೆ ಫಲಿಸದೆ ವ್ಯಕ್ತಿ ಮೃತಪಟ್ಟರೂ ಚಿನ್ನದ ಸರ ಕದ್ದವರು ಯಾರು? ಎಂಬುದು ಯಕ್ಷಪ್ರಶ್ನೆಯಾಗಿದೆ. ಐಸಿಯುನಲ್ಲೇ ಚಿನ್ನ ಕಳುವಾಯಿತೇ ಎಂಬ ಶಂಕೆಯೂ ವ್ಯಕ್ತವಾಗಿದೆ... ಮೃತರ ಸಂಬಂಧಿಕರು ತಿಂಗಳ ನಂತರ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?: ಈ ಘಟನೆ ಅ.27ರಂದು ವಿಜಯಪುರದ ಆರೋಗ್ಯಧಾಮ ಆಸ್ಪತ್ರೆಯಲ್ಲಿ ನಡೆದಿದೆ. ಇಲ್ಲಿನ ಚಾಲುಕ್ಯ ನಗರದ ನಿವಾಸಿ ಶ್ರೀಕಾಂತ ಕೊರಚಗಾಂವ ಎಂಬುವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಪುತ್ರ ವೀರೇಶ ಕೊರಚಗಾಂವ ಆರೋಗ್ಯಧಾಮ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಶ್ರೀಕಾಂತ ಅವರಿಗೆ ಕೂಡಲೇ ಐಸಿಯುನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದರು. ಔಷಧ ತರಲೆಂದು ವೀರೇಂದ್ರ ಹೊರಗಡೆ ಹೋಗಿದ್ದರು. ಐಸಿಯುನಲ್ಲಿದ್ದ ಶ್ರೀಕಾಂತ ಅವರ ಕೈಯಲ್ಲಿನ 10 ಗ್ರಾಂ ಚಿನ್ನದ ಉಂಗುರವನ್ನು ಸಂಬಂಧಿಕ ಪ್ರವೀಣ ಕೊರಚಗಾಂವ ಅವರಿಗೆ ಕೊಟ್ಟು ಸಹಿ ಪಡೆದುಕೊಳ್ಳಲಾಗಿತ್ತು. ಆಗ ಶ್ರೀಕಾಂತ ಅವರ ಕೊರಳಲ್ಲಿದ್ದ ಚಿನ್ನದ ಸರದ ಬಗ್ಗೆ ಕೇಳಿದಾಗ ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿ ಕೊಡುವುದಾಗಿ ಹಿರಿಯ ಸಿಬ್ಬಂದಿ ಹೇಳಿದ್ದರು.
ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ರೀಕಾಂತ ಅವರನ್ನು ಆರೋಗ್ಯಧಾಮ ಆಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಯಶೋದಾ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ನ.3ರಂದು ಶ್ರೀಕಾಂತ ಮೃತಪಟ್ಟರು. ಶ್ರೀಕಾಂತ ಅವರ ಕೊರಳಲ್ಲಿದ್ದ ಚಿನ್ನದ ಸರ ಎಲ್ಲಿ ಹೋಯಿತು? ಎಂದು ಅವರ ಪುತ್ರ ವೀರೇಂದ್ರ ಸಾಕಷ್ಟು ಹುಡುಕಾಡಿದ್ದಾರೆ. ಆಸ್ಪತ್ರೆಗೆ ಅಲೆದಾಡಿದ್ದಾರೆ. ಅದು ಸಿಗದಿದ್ದಾಗ ನ.25ರಂದು ಆದರ್ಶ ನಗರ ಠಾಣೆಗೆ ದೂರು ನೀಡಿದ್ದಾರೆ. ಅ.27ರಂದು ಮಧ್ಯಾಹ್ನ 1.30ರಿಂದ 3.30ರ ಸಮಯದಲ್ಲಿ ಆರೋಗ್ಯಧಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶ್ರೀಕಾಂತ ಕೊರಳಲ್ಲಿದ್ದ 1.20 ಲಕ್ಷ ರೂ.ಗಳ 30 ಗ್ರಾಂ ಚಿನ್ನದ ಸರ ಕಳ್ಳತನವಾಗಿದೆ ಎಂದು ದೂರು ದಾಖಲಿಸಿರುವ ವೀರೇಂದ್ರ, ಅದನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.