ಢಾಬಾ ಬಾಬಾ ಆರೋಪ; ಸ್ಟೇಟಸ್​ನಲ್ಲಿ ಸ್ಟೇಟ್​ಮೆಂಟ್​ ತೆರೆದಿಟ್ಟ ಯೂ-ಟ್ಯೂಬರ್​

Baba ka Daba
Published on

ನವದೆಹಲಿ: ಕಳೆದ ಕೆಲದಿನಗಳ ಹಿಂದೆ ಭಾರಿ ಸುದ್ದಿ ಆಗಿದ್ದ 'ಬಾಬಾ ಕಾ ಢಾಬಾ' ಮತ್ತೆ ಸುದ್ದಿಯಲ್ಲಿದೆ. ಒಂದೊಳ್ಳೆಯ ಕಾರಣಕ್ಕೆ ಸುದ್ದಿ ಆಗಿದ್ದ 'ಬಾಬಾ ಕಾ ಢಾಬಾ' ಈಗ ಒಂದು ಬೇಸರದ ವಿಚಾರಕ್ಕೆ ಮುನ್ನೆಲೆಗೆ ಬಂದಿದೆ.

ದಕ್ಷಿಣ ದೆಹಲಿಯಲ್ಲಿ ಕಾಂತ ಪ್ರಸಾದ ಎಂಬ ವಯೋವೃದ್ಧ ವ್ಯಕ್ತಿ ಪತ್ನಿ ಜತೆ ಸೇರಿಕೊಂಡು ನಡೆಸುತ್ತಿರುವ 'ಬಾಬಾ ಕಾ ಢಾಬಾ', ಒಂದು ದಿನ ಇದ್ದಕ್ಕಿದ್ದಂತೆ ಯೂ-ಟ್ಯೂಬರ್​ ಒಬ್ಬರಿಂದ ಜಗತ್​ ಪ್ರಸಿದ್ಧಿ ಆಗಿದ್ದಷ್ಟೇ ಅಲ್ಲ, ವ್ಯಾಪಾರ ಇಲ್ಲದೆ ಪರಿತಪಿಸುತ್ತಿದ್ದ ಕಾಂತ ಪ್ರಸಾದ್​ ಬಿಡುವಿಲ್ಲದ ವ್ಯಾಪಾರದಲ್ಲಿ ನಿರತರಾದರು. ಇದಕ್ಕೆ ಕಾರಣವಾಗಿದ್ದು ಗೌರವ್ ವಾಸನ್ ಎಂಬವರು ತಮ್ಮ 'ಸ್ವಾದ್ ಅಫಿಷಿಯಲ್' ಎಂಬ ಯೂ-ಟ್ಯೂಬ್​ ಚಾನೆಲ್​ನಲ್ಲಿ ಮಾಡಿದ್ದ ವಿಡಿಯೋ.

ಹೀಗೆ ತನಗೆ ನೆರವಾಗಿದ್ದ ಗೌರವ್ ವಿರುದ್ಧ ವಂಚನೆ ಆರೋಪ ಮಾಡಿರುವ ಕಾಂತ ಪ್ರಸಾದ್​, ದಕ್ಷಿಣ ದೆಹಲಿಯ ಮಾಳವೀಯ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಾಸನ್ ಆತನ ಮತ್ತು ಕುಟುಂಬದವರ ಬ್ಯಾಂಕ್ ಖಾತೆ ವಿವರ ನೀಡಿದ್ದು, ಜಗತ್ತಿನ ದಾನಿಗಳು ನೀಡಿದ ಹಣವೆಲ್ಲ ಅದರಲ್ಲಿ ಜಮೆಯಾಗಿದೆ. ಅದನ್ನು ವಾಸನ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಆ ಮೂಲಕ ನಮಗೆ ವಿಶ್ವಾಸ ವಂಚನೆ ಮಾಡಿದ್ದಾರೆ ಎಂದು ಕಾಂತ ಪ್ರಸಾದ್ ಆರೋಪಿಸಿದ್ದಾರೆ.

ಕಾಂತ ಪ್ರಸಾದ್ ಆರೋಪಕ್ಕೆ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ತಿರುಗೇಟು ನೀಡಿರುವ ವಾಸನ್​ ಆ ಮೂಲಕ ಗೌರವ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಬ್ಯಾಂಕ್​ ಖಾತೆಯ ಸ್ಟೇಟ್​ಮೆಂಟ್ ಇಲ್ಲಿದೆ. ಯಾರ್ಯಾರು ಹಣ ಕೊಟ್ಟಿದ್ದಾರೋ ಅವರು ಚೆಕ್​ ಮಾಡಿಕೊಳ್ಳಬಹುದು ಎಂಬುದಾಗಿ ಅವರು ಫೇಸ್​ಬುಕ್​ ಪೇಜ್​ನಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಇನ್​ಸ್ಟಾಗ್ರಾಮ್​ನಲ್ಲೂ ಹೇಳುವ ಮೂಲಕ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net