

ನವದೆಹಲಿ : ಯೂಟ್ಯೂಬ್ ಮೂಲಕ ಬಾಬಾ ಕಾ ಢಾಬಾದ ಮಾಲೀಕರ ಸಂಕಷ್ಟವನ್ನು ಜಗತ್ತಿನೆದುರು ತೆರೆದಿಟ್ಟ ಯೂಟ್ಯೂಬರ್ ಗೌರವ್ ವಾಸನ್ ವಿರುದ್ಧವೇ ಈಗ ವಿಶ್ವಾಸ ವಂಚನೆ ಕೇಸ್ ದಾಖಲಾಗಿದೆ. ಕೇಸ್ ದಾಖಲಿಸಿದ್ದು ಬೇರಾರೂ ಅಲ್ಲ ಬಾಬಾ ಕಾ ಢಾಬಾ ಮಾಲೀಕ ಕಾಂತ ಪ್ರಸಾದ್ (80)!
ಲಾಕ್ಡೌನ್ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಕಾಂತ ಪ್ರಸಾದ್ ದಂಪತಿಯ ಹೃದಯವಿದ್ರಾವಕ ಚಿತ್ರಣವನ್ನು ಗೌರವ್ ವಾಸನ್ ವಿಡಿಯೋ ಚಿತ್ರೀಕರಿಸಿ ಯೂಟ್ಯೂಬ್ನಲ್ಲಿ ಹಾಕಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು. ಅಲ್ಲದೇ ನೆರವಿನ ಮಹಾಪೂರವೇ ಹರಿದುಬಂದಿತ್ತು. ಈಗ ದುಡ್ಡಿನ ವಿಚಾರದಲ್ಲಿ ಕಾಂತ ಪ್ರಸಾದ್ ಅವರಿಗೆ ಅಸಮಾಧಾನವಾಗಿದ್ದು, ದಕ್ಷಿಣ ದೆಹಲಿಯ ಮಾಳವೀಯ ನಗರದ ಪೊಲೀಸ್ ಠಾಣೆಯಲ್ಲಿ ಗೌರವ್ ವಾಸನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಆಂಗ್ಲಭಾಷೆಯ ಭ್ರಮೆಯಿಂದ ಹೊರಬನ್ನಿ: ಚಂದ್ರಶೇಖರ ಕಂಬಾರ
ಯೂಟ್ಯೂಬ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ಬಳಿಕ ಗೌರವವ ವಾಸನ್ ಆತನ ಮತ್ತು ಕುಟುಂಬದವರ ಬ್ಯಾಂಕ್ ಖಾತೆ ವಿವರ ನೀಡಿದ್ದಾರೆ. ಜಗತ್ತಿನ ದಾನಿಗಳು ನೀಡಿದ ಹಣವೆಲ್ಲವೂ ಅದರಲ್ಲಿ ಜಮೆಯಾಗಿದೆ. ಅದನ್ನು ವಾಸನ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಆ ಮೂಲಕ ನಮಗೆ ವಿಶ್ವಾಸ ವಂಚನೆ ಮಾಡಿದ್ದಾರೆ. ಇದೊಂದು ಪಿತೂರಿಯಾಗಿದ್ದು, ನಮ್ಮನ್ನು ಅವರು ಬಳಸಿಕೊಂಡಿದ್ದಾರೆ ಎಂದು ಕಾಂತ ಪ್ರಸಾದ್ ಆರೋಪಿಸಿದ್ದಾರೆ. (ಏಜೆನ್ಸೀಸ್)