

ನವದೆಹಲಿ: ಎರಡು ತಿಂಗಳ ಹಿಂದೆ ಬಾಬಾ ಕಾ ಡಾಬಾ ಹೆಸರಿನ ಸಣ್ಣ ಅಂಗಡಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿತ್ತು. 80 ವರ್ಷದ ಬಡ ವೃದ್ಧನೊಬ್ಬ ತನ್ನ ಪತ್ನಿಯೊಂದಿಗೆ ಸಣ್ಣ ಹೋಟೆಲ್ ರೀತಿಯ ಅಂಗಡಿ ನಡೆಸುತ್ತಿದ್ದು, ಲಾಕ್ಡೌನ್ನಲ್ಲಿ ಜನರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಿಕೊಂಡಿದ್ದ ಆ ವಿಡಿಯೋಕ್ಕೆ ನೆಟ್ಟಿಗರ ಮನಸ್ಸು ಕರಗಿತ್ತು. ವಿಡಿಯೋ ಅಪ್ಲೋಡ್ ಆಗಿ 24 ಗಂಟೆಗಳಲ್ಲೇ ಬಾಬಾ ಕಾ ಡಾಬಾದ ಮುಂದೆ ಜನ ಕ್ಯೂ ನಿಂತು ಊಟ ಖರೀದಿಸಿದ್ದರು. ಈ ರೀತಿ ರಾತ್ರೋರಾತ್ರಿ ಫೇಮಸ್ ಆದ ಬಾಬಾ ಕಾ ಡಾಬಾ ಈಗ ಹೇಗಿದೆ ಎಂದು ಗೊತ್ತಾದರೆ ನೀವು ಶಾಕ್ ಆಗ್ತೀರ.
ದೆಹಲಿಯ ಮಾಲ್ವಿಯಾ ನಗರದ ಬಾಬಾ ಕಾ ಡಾಬಾದ ಸಣ್ಣ ಅಂಗಡಿ ಈಗ ಅಲ್ಲಿಲ್ಲ. ಬದಲಾಗಿ ಅದೇ ಏರಿಯಾದಲ್ಲಿ ಬಾಬಾ ದಾ ಡಾಬಾ ಹೆಸರಿನ ದೊಡ್ಡ ರೆಸ್ಟೋರೆಂಟ್ ಒಂದು ಆರಂಭವಾಗಿದೆ. ಅಂದ ಹಾಗೆ ಈ ರೆಸ್ಟೋರೆಂಟ್ನ ಮಾಲೀಕರು ಕೂಡ ಅದೇ ಬಾಬಾ ಕಾ ಡಾಬಾದ ವೃದ್ಧ ದಂಪತಿ ಕಾಂತಾ ಪ್ರಸಾದ್ ಮತ್ತು ಬಾದಮಾ ದೇವಿ.
ವಿಡಿಯೋ ನೋಡಿದ್ದ ಜನರು ಬಾಬಾ ಕಾ ಡಾಬಾಕ್ಕೆ ಬಂದು ಸಾಲುಗಟ್ಟಿ ನಿಂತು ವ್ಯಾಪಾರ ಮಾಡಿದ್ದರು. ಅನೇಕ ದಾನಿಗಳು ಬಂದು ದಂಪತಿಗೆ ಸಹಾಯ ಮಾಡಿ ಹೋಗಿದ್ದರು. ಆ ಎಲ್ಲ ಹಣವನ್ನು ಉಳಿಸಿಕೊಂಡ ದಂಪತಿ ಈಗ ಅದೇ ಹಣದಲ್ಲಿ ರೆಸ್ಟೋರೆಂಟ್ ತೆರೆದಿದ್ದಾರೆ. ದೇವರ ದಯೆಯಿಂದ ನಾವು ಇಂದು ಯಾವುದೇ ಕಷ್ಟವಿಲ್ಲದೆ ನೆಮ್ಮದಿಯಿಂದ ಇದ್ದೇವೆ ಎನ್ನುತ್ತಾರೆ ಕಾಂತಾ ಪ್ರಸಾದ್ ಅವರು. (ಏಜೆನ್ಸೀಸ್)