

ಬೆಂಗಳೂರು: ಒಂದು ದಶಕದ ಹಿಂದೆ ಭಾರತೀಯ ಚಲನಚಿತ್ರೋದ್ಯಮದ ದಿಕ್ಕನ್ನೇ ಬದಲಿಸಿದ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಅಭಿನಯದ ‘ಬಾಹುಬಲಿ’ (Baahubali) ಬಿಡುಗಡೆಯಾಗಿ ಇದೀಗ 10 ವರ್ಷಗಳೇ ಕಳೆದಿವೆ. ಅದ್ಭುತ ದೃಶ್ಯಗಳು, ರೋಮಾಂಚಕ ಕಥಾಹಂದರ ಮತ್ತು ಅದ್ಧೂರಿ ವಿಎಫ್ಎಕ್ಸ್ ತಾಂತ್ರಿಕ ಕೆಲಸಗಳ ಮೂಲಕ ಚಿತ್ರ ಸಿನಿಪ್ರಿಯರನ್ನು ಆಕರ್ಷಿಸಿತು. ಈ ಐತಿಹಾಸಿಕ ಸಂದರ್ಭವನ್ನು ಸಂಭ್ರಮಿಸಲು 'ಬಾಹುಬಲಿ: ದಿ ಎಪಿಕ್' ಮೂಲಕ ಮತ್ತೊಮ್ಮೆ ಸಂಚಲನ ಮೂಡಿಸಲು ನಿರ್ದೇಶಕ ಎಸ್.ಎಸ್. ರಾಜಮೌಳಿ ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ರಲೀಸ್ ಡೇಟ್ ಕೂಡ ಘೋಷಿಸಿದ್ದಾರೆ.
ಬಾಹುಬಲಿ ಸಿನಿಮಾದ ಎರಡು ಭಾಗಗಳನ್ನು ಒಗ್ಗೂಡಿಸಿ, ಮತ್ತೊಮ್ಮೆ ತೆರೆ ಮೇಲೆ ತರುತ್ತಿರುವ ರಾಜಮೌಳಿ, ಅಂದು ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ಅಧ್ಯಾಯವನ್ನೇ ಸೃಷ್ಟಿಸಿದ ಬಾಹುಬಲಿ ಚಿತ್ರದ ಮೂರನೇ ಭಾಗವನ್ನು ಇದೇ ಅ.31ರಂದು ಸಿನಿಪ್ರೇಕ್ಷಕರ ಮುಂದಿಡಲು ಎದುರುನೋಡುತ್ತಿದ್ದಾರೆ. 2015 ಮತ್ತು 2017ರಲ್ಲಿ ರಿಲೀಸ್ ಆದ ಎರಡು ಭಾಗಗಳು ಅಂದು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ದಾಖಲೆಗಳನ್ನೇ ನಿರ್ಮಿಸಿತು. ಈ ಚಿತ್ರದಲ್ಲಿ ಮೂಡಿಬಂದ ಪಾತ್ರಗಳು ಇಂದಿಗೂ ಸಿನಿಪ್ರಿಯರ ತಲೆಯಲ್ಲಿ ಹಾಗೆಯೇ ಉಳಿದಿದೆ.
ಹಲವು ಪಾತ್ರಧಾರಿಗಳ ಪೈಕಿ ನಟಿ ರಮ್ಯ ಕೃಷ್ಣನ್ ಅಭಿನಯದ ಶಿವಗಾಮಿ ಪಾತ್ರ ನೋಡುಗರ ಹುಬ್ಬೇರಿಸಿತ್ತು. ಈ ಪಾತ್ರಕ್ಕೆ ಸಾಕಷ್ಟು ಜನಪ್ರಿಯತೆ ಕೂಡ ಲಭಿಸಿತು. ಶಿವಗಾಮಿ ಮೂಲಕ ತಮ್ಮ ಅಭಿಮಾನಿ ಬಳಗವನ್ನು ಇನ್ನಷ್ಟು ಹೆಚ್ಚಿಸಿಕೊಂಡ ರಮ್ಯ ಕೃಷ್ಣನ್, ರಾಜಮೌಳಿ ಕೊಟ್ಟ ಆಫರ್ ಅನ್ನು ಮೊದಲಿಗೆ ಬೇಡ ಎಂದಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಜಗಪತಿ ಬಾಬು ಅವರ 'ಜಯಮ್ಮು ನಿಶ್ಚಯಮ್ಮು ರಾ' ಎಂಬ ಟಾಕ್ ಶೋಗೆ ಆಗಮಿಸಿದ್ದ ರಮ್ಯ ಕೃಷ್ಣನ್, "ಬಾಹುಬಲಿ ಆಫರ್ ಅನ್ನು ಮೊದಲಿಗೆ ರಿಜೆಕ್ಟ್ ಮಾಡಿಬಿಟ್ಟಿದ್ದೆ. ಆರಂಭದಲ್ಲಿ ನನ್ನನ್ನು ಸಂಪರ್ಕಿಸಿದ್ದು ಸಿನಿಮಾದ ನಿರ್ಮಾಪಕರಾದ ಶೋಭು ಯಾರ್ಲಗಡ್ಡಾ ಅವರು. ನನಗೆ 40 ದಿನಗಳ ಕಾಲ ಶೂಟಿಂಗ್ನಲ್ಲಿ ಭಾಗಿಯಾಗಬೇಕು ಎಂದು ಹೇಳಿದರು. ಅದಕ್ಕೆ ನಾನು, '40 ದಿನಗಳು ಸಾಧ್ಯವೇ ಇಲ್ಲ ಸರ್! ಕ್ಷಮಿಸಿ, ನನ್ನಿಂದ ಇದು ಆಗಲ್ಲ' ಎಂದು ಹೇಳಿ, ಫೋನ್ ಕಟ್ ಮಾಡಿದೆ. ಆ ಕ್ಷಣಕ್ಕೆ ಬಾಹುಬಲಿಯ ಆಳವಾದ ಕಥಾಹಂದರ ಅಥವಾ ಪಾತ್ರದ ಮಹತ್ವದ ಬಗ್ಗೆ ಕಿಂಚಿತ್ತು ಗೊತ್ತಿರಲಿಲ್ಲ. ಬದಲಿಗೆ ಅದೊಂದು ಬಿಗ್ ಬಜೆಟ್ ಸಿನಿಮಾ ಅಂತ ಮಾತ್ರ ಗೊತ್ತಿತ್ತು" ಎಂದಿದ್ದಾರೆ.
ಬಾಹುಬಲಿ: ದಿ ಬಿಗಿನಿಂಗ್ (2015) ಮತ್ತು ಬಾಹುಬಲಿ: ದಿ ಕನ್ಕ್ಲ್ಯೂಷನ್ (2017) ಎರಡೂ ಚಿತ್ರಗಳು ಅಂದಿನ ಮಟ್ಟಿಗೆ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ದಾಖಲೆಗಳನ್ನೇ ನಿರ್ಮಿಸಿತು. ಈ ಎರಡರ ಕಥೆಯನ್ನು ಸೇರಿಸಿ, ‘ಬಾಹುಬಲಿ: ದಿ ಎಪಿಕ್’ ಎಂಬ ಶೀರ್ಷಿಕೆಯಡಿ ಮತ್ತೊಮ್ಮೆ ಸಿನಿಮಾವನ್ನು ಬೆಳ್ಳಿಪರದೆಯ ಮೇಲೆ ತರುತ್ತಿರುವ ರಾಜಮೌಳಿ, ಸಿನಿಪ್ರಿಯರೊಂದಿಗೆ ತಮ್ಮ ಸಂಭ್ರಮವನ್ನು ಆಚರಿಸಲು ದಿನಗಣನೆ ಎಣಿಸುತ್ತಿದ್ದಾರೆ. ಈಗಾಗಲೇ ಚಿತ್ರದ ರಿ-ಎಡಿಟಿಂಗ್ ಮತ್ತು ರಿ-ಮಾಸ್ಟರಿಂಗ್ ಕಟ್ಸ್ಗಳು ಸಂಪೂರ್ಣವಾಗಿದ್ದು, ಸೆನ್ಸಾರ್ ಕೆಲಸಗಳು ಸಹ ಪೂರ್ಣಗೊಂಡಿವೆ.
ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಸತ್ಯರಾಜ್ ಮತ್ತು ನಾಸರ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಗಣವಿದೆ. ಎಂಎಂ ಕೀರವಾಣಿಯವರ ಸಂಗೀತದೊಂದಿಗೆ, ಚಿತ್ರವು ರೀ-ರಿಲೀಸ್ ಆಗುತ್ತಿದೆ. ಅ.31ರಂದು ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಐಮ್ಯಾಕ್ಸ್, ಡಾಲ್ಬಿ ಸಿನಿಮಾ, 4ಡಿಎಕ್ಸ್, ಡಿ-ಬಾಕ್ಸ್ ಮತ್ತು ಇಪಿಕ್ಯು ಸೇರಿದಂತೆ ಬಹು ಪ್ರೀಮಿಯಂ ಫಾರ್ಮೆಟ್ಗಳಲ್ಲಿ ಬಿಡುಗಡೆಗೊಳ್ಳಲಿದೆ,(ಏಜೆನ್ಸೀಸ್).