

ಯಾವುದೇ ವ್ಯಕ್ತಿಯ ವಿಕಾಸ ಮತ್ತು ಸಾಧನೆಗೆ ಮುಖ್ಯವಾಗಿ ಶ್ರಮ, ಕ್ರಮ ಮತ್ತು ಧರ್ಮ ಎಂಬ ಮೂರಂಶ ಪ್ರಮುಖ. ಶ್ರಮಪಟ್ಟು ದುಡಿಯುವುದು, ಕ್ರಮಬದ್ಧವಾಗಿ ಬದುಕುವುದು ಹಾಗೂ ಧರ್ಮವಂತರಾಗಿ ನಡೆಯುವುದು. ಈ ಮೂರರ ಮೂಲಕ ನಾಡಿನ ಅತ್ಯುನ್ನತ ಸ್ಥಾನವನ್ನೇರಿರುವ ಅಪರೂಪದ ವ್ಯಕ್ತಿ ಬಿ.ಎಸ್.ಯಡಿಯೂರಪ್ಪ. ಯಾವುದೇ ಕೌಟುಂಬಿಕ ರಾಜಕೀಯ ಹಿನ್ನೆಲೆಯಿಲ್ಲದೆ, ಪರಿಸ್ಥಿತಿಯ ಫಲಾನುಭವಿಯಾಗದೆ, ಸತತ ಪರಿಶ್ರಮದಿಂದ ಉನ್ನತ ಸ್ಥಾನವನ್ನೇರಿರುವ ಬಿಎಸ್ವೈ ನಾಯಕತ್ವದ ಹಿಂದಿನ ಶಕ್ತಿ ಧರ್ಮ!
ಯಡಿಯೂರಪ್ಪ ಈ ಹಿಂದೆ ತಾವು ಅಧಿಕಾರಕ್ಕೆ ಬಂದ ಕೂಡಲೇ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಧ್ಯೇಯವಾಕ್ಯ ಘೊಷಿಸಿದ್ದರು. ಈ ವಾಕ್ಯವೇ ಅವರ ಸರ್ವಧರ್ಮ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. ಅಧಿಕಾರಕ್ಕೆ ಬಂದ ಕೂಡಲೇ ತಾವು ಹುಟ್ಟಿದ, ತಮ್ಮನ್ನು ಬೆಳೆಸಿದ ಸಮುದಾಯವನ್ನೇ ಮರೆಯುವವರ ನಡುವೆ ತಮ್ಮ ಸಮುದಾಯದ ಜತೆಗೆ ಸಮಾಜದ ಸರ್ವ ಸಮುದಾಯಗಳನ್ನೂ ಗೌರವಿಸುವ, ಅವುಗಳ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಅಪರೂಪದ ನಾಯಕ ಇವರು. ರಾಜ್ಯ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಎಲ್ಲ ಸಮಾಜದ ಮಠಗಳಿಗೂ ಬಜೆಟ್ನಲ್ಲಿ ಅನುದಾನ ಘೊಷಿಸಿ ಹೊಸ ದಾಖಲೆ ಬರೆದವರು.
ವೀರಶೈವ, ಬ್ರಾಹ್ಮಣ, ಒಕ್ಕಲಿಗ ಸಮುದಾಯ ಮಾತ್ರವಲ್ಲದೆ ದಲಿತ ಸಮುದಾಯವನ್ನೂ ಪ್ರತಿನಿಧಿಸುವ ಮಾದಾರ ಚನ್ನಯ್ಯ ಪೀಠದಿಂದ ಹಿಡಿದು ಭೋವಿ, ಬಂಜಾರ, ವಿಶ್ವಕರ್ಮ, ವಾಲ್ಮೀಕಿ ಸೇರಿ ಹಲವು ಮಠ-ಪೀಠಗಳ ಆಶೀರ್ವಾದ ಪಡೆದಿರುವ
ಬಿಎಸ್ವೈ, ಸಾಕಷ್ಟು ಮಹಾತ್ಮರ ಜಯಂತಿಗಳನ್ನು ಆರಂಭಿಸಿದರು. ದಾಸಶ್ರೇಷ್ಠರಾದ ಕನಕದಾಸರ ಜನ್ಮಸ್ಥಳದ ಸರ್ವಾಂಗೀಣ ಅಭಿವೃದ್ಧಿಗಾಗಿ ನೂತನ ಮಂಡಳಿ ಸ್ಥಾಪಿಸಿ ವಿಶೇಷ ಅನುದಾನ ನೀಡುವ ಮೂಲಕ ಕನಕದಾಸರ ಜಾತಿರಹಿತ ಸಮಾಜದ ಪರಿಕಲ್ಪನೆಗೆ ಚಾಲನೆ ನೀಡಿದರು. ಪಂಚಪೀಠಗಳು, ವಿರಕ್ತ ಮಠಗಳು, ಅಷ್ಟಮಠಗಳು ಸೇರಿ ನಾಡಿನ ಎಲ್ಲ ಮಠಕ್ಕೂ ಭೇಟಿ, ಆದ್ಯತೆ ನೀಡಿರುವ ಯಡಿಯೂರಪ್ಪ, ದೇಶದ ಪ್ರಸಿದ್ಧ ಧಾರ್ವಿುಕ ಕ್ಷೇತ್ರಗಳಲ್ಲೂ ವಿಶೇಷ ಪೂಜೆ ಸಲ್ಲಿಸುವ ದೈವಭಕ್ತಿ ಸಂಪನ್ನರು.
ರಾಜಧರ್ಮ ಪರಿಪಾಲಕ
ಹಿಂದೆ ರಾಜರನ್ನು ಪ್ರಜೆಗಳು ದೇವರಂತೆ ಗೌರವಿಸುತ್ತಿದ್ದರು. ಅದಕ್ಕೆ ಕಾರಣ ರಾಜ ಯಾವುದೇ ಜಾತಿ, ಮತ, ಪಂಥ, ಪ್ರದೇಶ, ಭಾಷೆ, ಸಮುದಾಯ ಎಂಬ ಭೇದವಿಲ್ಲದೆ ಸರ್ವರನ್ನೂ ಸಮನಾಗಿ ಕಾಣುತ್ತಿದ್ದ. ರಾಜನಿಗೆ ಸರಿಯಾದ ಮಾರ್ಗದರ್ಶನ ಮಾಡಲು ರಾಜಗುರುಗಳು ಇರುತ್ತಿದ್ದರು. ಅಂತೆಯೇ ಯಡಿಯೂರಪ್ಪ ಕೂಡ ವಿರೋಧಿಗಳ ಟೀಕೆ ಟಿಪ್ಪಣಿಗಳು ಎಷ್ಟೇ ಬಂದರೂ ಧರ್ಮಗುರುಗಳ ಸಲಹೆ, ಮಾರ್ಗದರ್ಶನ ಪಡೆಯಲು ಮಠಗಳಿಗೆ ಹೋಗುತ್ತಾರೆ. ಜತೆಗೆ ಸರ್ಕಾರ ಮಾಡಬೇಕಾದ ಕೆಲಸವನ್ನು ಮಠಗಳು ಮಾಡುತ್ತಿವೆ ಎಂಬ ಕಾರಣಕ್ಕೆ ಅನುದಾನ ನೀಡಿದರು. ವಿಪರ್ಯಾಸವೆಂದರೆ ವಿರೋಧಿಸಿದವರೂ ಅನಿವಾರ್ಯವಾಗಿ ಯಡಿಯೂರಪ್ಪ ಆರಂಭಿಸಿದ ಸತ್ಸಂಪ್ರದಾಯವನ್ನು ತಮ್ಮ ಸರ್ಕಾರದ ಅವಧಿಯಲ್ಲೂ ಮುಂದುವರಿಸಬೇಕಾಯಿತು. ಬಿಎಸ್ವೈ ಹುಟ್ಟಿನಿಂದ ವೀರಶೈವ ಸಮಾಜದವರಾದರೂ ಆ ಕಾಲದಿಂದ ಇವರ ಆಪ್ತ ವಲಯದಲ್ಲಿ ಇತರ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮನ್ನು ನಂಬಿರುವ ಯಾವುದೇ ಸಮುದಾಯದ ಬೆಂಬಲಿಗರಿದ್ದರೂ ಅವರಿಗೆ ಸ್ಥಾನ ನೀಡಿದ ದೊಡ್ಡತನ ಬಿಎಸ್ವೈ ಅವರದ್ದು. ಇತ್ತೀಚೆಗೆ ನಡೆದ ಆಪರೇಷನ್ ಕಮಲದಲ್ಲಿ ರಾಜೀನಾಮೆ ನೀಡಿದ 17 ಶಾಸಕರಲ್ಲಿ ಮೂವರು ಮಾತ್ರ ವೀರಶೈವರು. ಉಪಚುನಾವಣೆಯಲ್ಲಿ ಗೆದ್ದ 12 ಜನರಲ್ಲಿ ಓರ್ವ ವೀರಶೈವ ಶಾಸಕನಿಗೆ ಮಾತ್ರ ಸಚಿವ ಸ್ಥಾನ ನೀಡಿ, ಇನ್ನುಳಿದ 10 ಜನ ಇತರ ಸಮುದಾಯಗಳ ನಾಯಕರನ್ನು ಸಚಿವರನ್ನಾಗಿ ಮಾಡಿ ರಾಜಧರ್ಮ ಪರಿಪಾಲಿಸಿದ್ದಾರೆ. ಆಡಳಿತ, ರಾಜಕೀಯದಲ್ಲಿ ಯಾವುದೇ ಪಕ್ಷಪಾತ, ಜಾತಿವಾದ ಅನುಸರಿಸದೆ ಇರುವುದರಿಂದಲೇ ಸರ್ವಧರ್ಮ ನಾಯಕ ಎನಿಸಿಕೊಂಡಿದ್ದಾರೆ.
ಪ್ರಶಾಂತ ರಿಪ್ಪನ್ಪೇಟೆ.