ಗುರು-ಶನಿ ಸಂಯೋಗ ಆರಂಭ: ಎದುರಾಗಲಿದೆ ಅನೇಕ ಅಪಾಯಗಳು, ಪರಿಹಾರಕ್ಕಿರುವುದೊಂದೇ ಮಾರ್ಗ

Rajguru
Published on

ಡಿ.6ರಿಂದ ಗುರು ಹಾಗೂ ಶನಿ ಸಂಯೋಗ ಆರಂಭವಾಗಲಿದೆ. 20 ವರ್ಷದ ನಂತರ ಸಂಭವಿಸುತ್ತಿರುವ ಈ ವಿದ್ಯಮಾನದಿಂದ ಅನೇಕ ಹಾನಿಗಳು, ಅಪಾಯಗಳು, ಅವುಗಳನ್ನು ಎದುರಿಸಬೇಕಾದರೆ ಪಾಲಿಸಬೇಕಾದ ಅಂಶಗಳನ್ನು ರಾಜಗುರು ಬಿ.ಎಸ್.ದ್ವಾರಕಾನಾಥ್ ವಿವರಿಸಿದ್ದಾರೆ.

ಡಿಸೆಂಬರ್ 6ರಿಂದ ಗುರು ಹಾಗೂ ಶನಿ ಸಂಯೋಗದೆಡೆಗೆ ಚಲನೆ ಆರಂಭವಾಗಲಿದೆ. ಗುರು ದೇವತೆಗಳ ಗುರು, ಧನಾತ್ಮಕ ಚಿಹ್ನೆ (ಪ್ಲಸ್). ಶನಿ ಪಾಪ ಗ್ರಹ, ನಕಾರಾತ್ಮಕ ಚಿಹ್ನೆ (ಮೈನಸ್). ಜ್ಯೋತಿಷ ಎಂದರೆ ಶುದ್ಧ ವಿಜ್ಞಾನ, ಭೂಗೋಳ ಹಾಗೂ ಗಣಿತ. ಗಣಿತದ ಲೆಕ್ಕದಲ್ಲಿ ನೋಡುವುದಾದರೆ, ಮೈನಸ್ ಹಾಗೂ ಮೈನಸ್ ಗುಣಿಸಿದರೆ ಫಲಿತಾಂಶ ಪ್ಲಸ್. ಹಾಗೇ, ಪ್ಲಸ್ ಮತ್ತು ಪ್ಲಸ್ ಗುಣಿಸಿದರೂ ಫಲಿತಾಂಶ ಪ್ಲಸ್. ಆದರೆ ಪ್ಲಸ್ ಹಾಗೂ ಮೈನಸ್ ಗುಣಿಸಿದರೆ ಪ್ಲಸ್ ಅಂಶ ಮರೆಯಾಗಿ ಮೈನಸ್ ಮೆರೆಯುತ್ತದೆ. ಅದೇ ರೀತಿ ಗುರು ಹಾಗೂ ಶನಿ ಸಂಯೋಗದಲ್ಲಿ ಗುರು ನೀಚನಾಗುತ್ತಾನೆ. ಇದೀಗ ಗುರುವು ಮಕರ ರಾಶಿಯಲ್ಲಿದ್ದಾನೆ. ಮಕರ ಶನಿಯ ಸ್ವಂತ ಮನೆ. ಬೇರೆಯವರ ಮನೆಗೆ ಬಂದಮೇಲೆ ಅಲ್ಲಿನ ಮಾಲೀಕರ ನಿಬಂಧನೆಗಳನ್ನು ಪಾಲಿಸಲೇಬೇಕಲ್ಲ? ಹಾಗೆಯೇ ಗುರು ವರ್ತನೆ ಮಾಡಬೇಕಾಗುತ್ತದೆ. ಇಪ್ಪತ್ತು ವರ್ಷದ ನಂತರ ನಡೆಯುತ್ತಿರುವ ಈ ವಿದ್ಯಮಾನ 2021ರ ಏಪ್ರಿಲ್ 5ವರೆಗೆ ಮುಂದುವರಿಯಲಿದೆ.

ಈ ಸಮಯದಲ್ಲಿ ದೇಶ ಹಾಗೂ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ, ವೈಮನಸ್ಸು, ಕೆಲವು ವಿಚಾರಗಳಲ್ಲಿ ಸರ್ಕಾರದ ನಡೆ ಕುರಿತು ಪ್ರಜೆಗಳಲ್ಲಿ ಅನುಮಾನ ಮೂಡುತ್ತವೆ. ಸಿಬಿಐ, ಆರ್​ಬಿಐ, ನ್ಯಾಯಾಂಗ, ಚುನಾವಣಾ ಆಯೋಗದಂತಹ ಸಂಸ್ಥೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಅನುಮಾನದ ಜತೆಗೆ ಇವಿಎಂ ಬಳಕೆ ಬೇಡ ಎಂಬ ದೊಡ್ಡ ಕೂಗೇಳುತ್ತದೆ. ಗುರುಗಳು ಸಾಕ್ಷಾತ್ ಈಶ್ವರನ ಅವತಾರವೇ ಆಗಿದ್ದು, ನಮ್ಮ ಕಣ್ಣಿಗೆ ಮಾತ್ರ ಮಾನವರಂತೆ ಕಾಣುತ್ತಾರೆ ಎಂದು ಶ್ರೀಗುರು ಚರಿತ್ರೆಯಲ್ಲಿ ತಿಳಿಸಿದ್ದಾರೆ. ಇಂತಹ ಸಮಯದಲ್ಲಿ ಸಾಕ್ಷಾತ್ ಗುರುವಿಗೆ, ಶೃಂಗೇರಿ ಜ್ಞಾನಪೀಠದ ಶ್ರೀ ಭಾರತೀತೀರ್ಥ ಶ್ರೀಪಾದಂಗಳು, ಶ್ರೀ ವಿಧುಶೇಖರ ಭಾರತೀ ಶ್ರೀಪಾದಂಗಳಿಗೆ ನಮಸ್ಕರಿಸಿ, ಎಲ್ಲರಿಗೂ ಸನ್ಮಂಗಳವಾಗಲಿ ಎಂದು ಪ್ರಾರ್ಥಿಸೋಣ, ಧರ್ಮ ಮಾರ್ಗದಲ್ಲೇ ನಡೆಯೋಣ.

ರಾಜ್ಯದಲ್ಲೂ ಅಸ್ಥಿರತೆ: 2018ರ ಚುನಾವಣೆ ನಂತರ ರಾಜ್ಯದಲ್ಲಿ ಸರ್ಕಾರಗಳು ಬರುತ್ತಿವೆ, ಹೋಗುತ್ತಿವೆ. ಆದರೆ ಜನಕಲ್ಯಾಣ ಆಗುತ್ತಿದೆಯೇ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಇದೀಗ ವಿವಿಧ ಸಂಸ್ಥೆಗಳಿಗೆ ನೇಮಕದ ಕುರಿತು ಭಾಜಪದಲ್ಲಿ ಎದ್ದಿರುವ ಚರ್ಚೆಗಳು ಡಿ.6ರ ನಂತರದಲ್ಲಿ ತೀವ್ರ ಸ್ವರೂಪ ಪಡೆಯುತ್ತವೆ. ನಿಗಮ-ಮಂಡಳಿಗಳ, ಪ್ರಾಧಿಕಾರಗಳ ಮೂಲಕ ಜಾತಿ ರಾಜಕಾರಣ ಮಾಡಲಾಗುತ್ತಿದೆ, ಆಡಳಿತ ನೀಡುವ ಬದಲಿಗೆ ಸಂಘಟನೆಯಲ್ಲೇ ಸಮಯ ಕಳೆಯುತ್ತಿದೆ ಎಂಬ ಮಾತು ಬಲವಾಗುತ್ತದೆ. ಕಲೆ ಸಂಸ್ಕೃತಿ ಹೆಸರಿನಲ್ಲಿ ಯಾರನ್ನು ನಾಮನಿರ್ದೇಶನ ಮಾಡಲಾಯಿತೆಂದು ಒಮ್ಮೆ ಆಲೋಚಿಸಬೇಕು. ನಾರಾಯಣಮೂರ್ತಿ, ಅಜೀಂ ಪ್ರೇಮ್ ಅಂಥವರಿಗೆ ಎಂದಿಗೂ ಸ್ಥಾನ ಸಿಕ್ಕುವುದಿಲ್ಲ, ಸಾಲ ಮಾಡಿ ದೇಶ ತೊರೆಯುವ ಮಲ್ಯರಂಥವರಿಗೇ ಸ್ಥಾನ ಕಲ್ಪಿಸುವುದು ವ್ಯವಸ್ಥೆಯ ಕನ್ನಡಿ. ಎಲ್ಲರೂ ಮಂತ್ರಿಯಾಗಬೇಕೆಂಬ ಹಂಬಲ, ಆಡಳಿತದ ಕುರಿತ ಬೇಸರಗಳು, ನಾಯಕತ್ವ ಬದಲಾವಣೆ ಕೂಗನ್ನೂ ಹೆಚ್ಚಿಸುತ್ತವೆ. ‘ನಾವು ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದಿಲ್ಲ’ ಎಂದು ಪದೇಪದೆ ಹೇಳುತ್ತಿರುವುದರ ಅರ್ಥ ಇದೇ. ಡಿ.21ರ ನಂತರ ಕೇಂದ್ರ ಹಾಗೂ ರಾಜ್ಯದ ನಡುವಿನ ಸಂಘರ್ಷ ಹೆಚ್ಚಾಗುತ್ತದೆ. ಜಾತಿಗಳ ಹಿಂದೆ ಬೀಳುವ ಬದಲು ಜನರ ಒಳಿತಿಗೆ ಕೆಲಸ ಮಾಡಲಿ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಮುಖ್ಯಮಂತ್ರಿಯವರು ಗುರುವಿನ ಪಾದಕ್ಕೆರಗಬೇಕು.

ಅಮೆರಿಕದ ಜತೆಗೆ ಎಚ್ಚರದ ಹೆಜ್ಜೆ: ಪಾಪಗ್ರಹ ಹಾಗೂ ಪುಣ್ಯಗ್ರಹ ಒಟ್ಟಾದಾಗ, ನೀನು ನಿನ್ನಂತೆ ವರ್ತಿಸು ಎಂಬುದು ಶಾಸ್ತ್ರಗಳ ತಿಳಿವಳಿಕೆ. ಅಮೆರಿಕದ ಜತೆಗೆ ಭಾರತ ತನ್ನ ನೈಜ ಸ್ವಭಾವದಂತೆ ವರ್ತಿಸಬೇಕು. ಚುನಾವಣೆ ಸೋಲನ್ನು ಡೊನಾಲ್ಡ್ ಟ್ರಂಪ್ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ ಎನ್ನಿಸುವುದಿಲ್ಲ. ಟ್ರಂಪ್ ಕುರಿತಾಗಲಿ ಅಥವಾ ಜೋ ಬೈಡೆನ್ ಕುರಿತಾಗಲಿ ಒಬ್ಬರ ಬಗ್ಗೆ ಸ್ನೇಹ, ಮತ್ತೊಬ್ಬರನ್ನು ದೂರ ಇಡುವ ಕೆಲಸ ಮಾಡಬಾರದು. ಮುಂದಿನ ದಿನಗಳಲ್ಲಿ ನೆರೆ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಅಪಾಯವಿದೆ. ಮುಸ್ಲಿಂ ಆಡಳಿತವಿರುವ ಇನ್ನಿತರ ದೇಶಗಳಿಂದ ಹೆಚ್ಚಿನ ಸಂಕಷ್ಟ ಎದುರಾಗಲಿದೆ.

ಪರ್ಯಾಯ ಏನು?: ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಂತರ ಪರ್ಯಾಯ ಯಾರು ಎಂಬ ಬಗ್ಗೆ ಆ ಪಕ್ಷ ಚಿಂತನೆ ನಡೆಸಿರುವಂತೆ ಕಾಣುತ್ತಿಲ್ಲ. ಅದೇ ರೀತಿ ಬೇರೆ ಪಕ್ಷಗಳಲ್ಲೂ ಮುಂದಿನ ಪೀಳಿಗೆಯ ನಾಯಕರನ್ನು ಬೆಳೆಸುವ ಕ್ರಿಯೆಗಳು ಗೋಚರಿಸುತ್ತಿಲ್ಲ. 2023ರ ಚುನಾವಣೆ ವೇಳೆಗೆ ಮೋದಿ ವಿರುದ್ಧ ಗಟ್ಟಿ ದನಿಯಲ್ಲಿ ಮಾತನಾಡಬಲ್ಲ ನಾಯಕನೊಬ್ಬ ಹೊರಹೊಮ್ಮುತ್ತಾನೆ. ಎಲ್ಲ ಪ್ರತಿಪಕ್ಷಗಳೂ ಸಂಪೂರ್ಣವಾಗಿ ಒಗ್ಗೂಡುತ್ತವೆ. 2024ರ ಚುನಾವಣೆಯಲ್ಲಿ ಮೋದಿ ನೇತೃತ್ವವೇ ಜಯಿಸುತ್ತಾದರೂ, ಅದು ಸುಲಭದ ಗೆಲುವಾಗಿರುವುದಿಲ್ಲ. 2021ರ ಏ.5ರೊಳಗೆ ದೇಶದ ಉನ್ನತ ಮಟ್ಟದ ನಾಯಕನೊಬ್ಬ ಕಣ್ಮರೆಯಾಗುವ ಅಪಾಯವೂ ಇದೆ. ರಾಷ್ಟ್ರವನ್ನು ನಡೆಸುವವರಿಗೆ ಚುನಾವಣೆಯೇ ಮುಖ್ಯ ಅಜೆಂಡಾ ಆಗಬಾರದು. ದೇಶಕ್ಕೆ ಸಂಕಷ್ಟವಿದ್ದಾಗ ಮೋದಿ ಅವರನ್ನು ಜನರು ಆಯ್ಕೆ ಮಾಡಿದ್ದು, ಸಂಕಷ್ಟಗಳ ಪರಿಹಾರಕ್ಕೆ. ಗುರು-ಶನಿ ಸಂಯೋಜನೆಯಿಂದಾಗಿ, ಇದೀಗ ನಡೆಯುತ್ತಿರುವ ರೈತರ ಹೋರಾಟ ಮತ್ತಷ್ಟು ಹೆಚ್ಚಾಗುವ ಸಂಭವವಿದೆ.

ಜನವರಿ 18ಕ್ಕೆ ಗುರು-ಶನಿ-ಶುಕ್ರ ಹಾಗೂ ಸೂರ್ಯ ಒಟ್ಟಾಗುತ್ತಾರೆ. ನಾಲ್ಕರಲ್ಲಿ ಗುರು ಒಬ್ಬನೇ ಪುಣ್ಯಗ್ರಹ, ಉಳಿದೆಲ್ಲವೂ ಪಾಪ ಗ್ರಹಗಳು. ಈ ವೇಳೆ ದೇಶದಲ್ಲಿ ವಾದ ವಿವಾದ ಹೆಚ್ಚಿ, ಇವಿಎಂ ಕುರಿತ ವಿವಾದ ಬಲವಾಗುತ್ತದೆ. ನಿರುದ್ಯೋಗ ಹೆಚ್ಚಳವಾಗಲಿದೆ. ಸ್ವಾಯತ್ತ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಆರ್ಥಿಕತೆ ಬಲಗೊಳಿಸಲು ತಜ್ಞರೊಬ್ಬರ ಸಲಹೆ ಪಡೆಯಲೇಬೇಕು ಅಥವಾ ಆರ್ಥಿಕತೆ ನೇತೃತ್ವ ವಹಿಸಿರುವವರನ್ನು ಬದಲಿಸಬೇಕು. ಚೀನಾ ಉತ್ಪನ್ನ ನಿಷೇಧಿಸಿದರಷ್ಟೇ ಸಾಲದು, ಭಾರತದಲ್ಲಿ ಉತ್ಪಾದಕತೆ ಹೆಚ್ಚಳವಾಗಬೇಕು. ಏ.4ರ ನಂತರ ಗುರುವು ಕುಂಭಕ್ಕೆ ಬಂದು, ನಂತರ ಸ್ವಂತ ಮನೆ ಮೀನ ಸೇರಿದಾಗ ಭಾರತ ವಿಶ್ವದಲ್ಲೇ ಅಗ್ರಸ್ಥಾನಕ್ಕೇರುತ್ತದೆ.

ನೆರೆ ರಾಜ್ಯದ ರಾಜಕಾರಣ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದಿಲ್ಲವಾದರೂ ತನ್ನ ಅಸ್ತಿತ್ವವನ್ನು ಸ್ಪಷ್ಟವಾಗಿ ತೋರಿಸುತ್ತದೆ. ತಮಿಳುನಾಡಿನಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ತೆಲಂಗಾಣದಲ್ಲಿ ರಾಜಕೀಯ ಅಸ್ಥಿರತೆ ಎದುರಾಗಲಿದೆ. ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿ ಇರುವವರು ಎಚ್ಚರ ತಪ್ಪಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ.

ಕರೊನಾ ಲಸಿಕೆ ಬರುವುದಿಲ್ಲ

ತಾವು ಲಸಿಕೆ ಕಂಡು ಹಿಡಿದಿದ್ದೇವೆ, ಕಂಡು ಹಿಡಿಯುತ್ತಿದ್ದೇವೆ ಎಂದು ಅನೇಕ ದೇಶಗಳು ಹೇಳಿಕೊಳ್ಳುತ್ತಿವೆ. ಆದರೆ ಜಲ ಮತ್ತು ವಾಯು ತತ್ವದಿಂದ ಬಂದಿರುವ ಈ ಮಹಾಮಾರಿ ಪ್ರಕೃತಿದತ್ತವಾದದ್ದು. ಟೈಫಾಯ್್ಡೆ ಲಸಿಕೆ ಕಂಡು ಹಿಡಿಯಲು ಎಷ್ಟು ವರ್ಷ ತಗುಲಿತು? ಮಲೇರಿಯಾಕ್ಕೆ ಇಲ್ಲಿವರೆಗೆ ಉತ್ತಮ ಔಷಧವಿಲ್ಲ. ಕರೊನಾ ಅದಾಗಿಯೇ ಕಣ್ಮರೆಯಾಗಲಿದೆಯೇ ವಿನಾ ಲಸಿಕೆಯಿಂದಲ್ಲ. ಮನುಷ್ಯನ ಕೈಯಲ್ಲಿ ಏನೂ ಇಲ್ಲ. ಶಿವ ಪಂಚಾಕ್ಷರಿ, ಓಂಕಾರ ಜಪ ಮಾಡಿದರೆ ರೋಗ ನಿವಾರಣೆಯಾಗುತ್ತದೆ, ಆದರೆ ಜನರಿಗೆ ಅಷ್ಟು ತಾಳ್ಮೆಯಿಲ್ಲ. ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸುವುದರಿಂದ ಸೋಂಕು ಹರಡುವ ಭೀತಿ ಇದೆ. ಏ.5ರವರೆಗೆ ಪ್ರಾಥಮಿಕ ಹಂತದ ಶಾಲೆಗಳನ್ನು ಆರಂಭಿಸುವ ಚಿಂತನೆಯೇ ಬೇಡ. ಅರಣ್ಯನಾಶದಿಂದ ಆಮ್ಲಜನಕ ಉತ್ಪತ್ತಿ ಕಡಿಮೆಯಾಗಲಿದ್ದು, ಸರ್ಕಾರ ಅರಣ್ಯೀಕರಣದ ಕುರಿತು ಗಂಭೀರವಾಗಿ ಹೆಜ್ಜೆ ಇಡಬೇಕು. ಮುಂದಿನ ದಿನಗಳಲ್ಲಿ ಗಾಳಿ ಸೋಂಕಿನಿಂದ ಕಣ್ಣಿನ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ.

ಇಸ್ರೋ ಉಡಾವಣೆಗಳು ಬೇಡ

ಗುರು- ಶನಿ ಸಂಯೋಗದ ನಂತರ 2021ರ ಜನವರಿ 16ರವರೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಯಾವುದೇ ಉಪಗ್ರಹ, ರಾಕೆಟ್ ಉಡಾವಣೆ ಯೋಜನೆ ಹಮ್ಮಿಕೊಳ್ಳಬಾರದು. ಆಂಧ್ರ ಸೇರಿ ಅನೇಕ ಕಡೆಗಳಲ್ಲಿ ತೀವ್ರ ಮಳೆ ಸಹಿತ ಗಾಳಿ ಬೀಸಲಿದೆ. ವಿಜ್ಞಾನವು ದೇಶ-ಕಾಲ-ಪದಾರ್ಥ ಅನುಸಾರವಾಗಿ ಕೆಲಸ ಮಾಡಬೇಕು. ಶೃಂಗೇರಿಯ ಮಲಹಾನಿಕೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕಕ್ಕೆ ಸಂಕಲ್ಪ ಮಾಡಿದ್ದೇನೆ, ಇಸ್ರೊ ಮುಖ್ಯಸ್ಥರು ಅಲ್ಲಿಗೆ ಬಂದ ನಂತರ ಯೋಜನೆಗಳಿಗೆ ಕೈಹಾಕಲಿ. ದೇಶಕ್ಕೆ ಮತ್ತಷ್ಟು ಕೀರ್ತಿಯನ್ನು ಇಸ್ರೋ ತರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net