

Supreme Court : ಸುಪ್ರೀಂಕೋರ್ಟ್ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ಗವಾಯಿ(ಬಿ.ಆರ್.ಗವಾಯಿ) ಮಂಗಳವಾರ ನೇಮಕಗೊಂಡಿದ್ದು, ಮೇ.14ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಭಾರತದ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಈ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ.
''ಭಾರತದ ಸಂವಿಧಾನವು ನೀಡಿರುವ ಅಧಿಕಾರದ ಅಡಿಯಲ್ಲಿ ಈ ನೇಮಕಾತಿ ಮಾಡಲಾಗಿದ್ದು, ಪ್ರಸ್ತುತ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ ಗವಾಯಿ ಅವರು ಮೇ 14, 2025 ರಿಂದ ಜಾರಿಗೆ ಬರುವಂತೆ ತಮ್ಮ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.
ಗವಾಯಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಪ್ರಸ್ತುತ ಇರುವ ಸಂಜಯ್ ಖನ್ನಾ ಅವರು ಸಿಜೆಐ ಸ್ಥಾನದಿಂದ ಮೇ 13ರಂದು ನಿವೃತ್ತರಾಗಲಿದ್ದಾರೆ. ಗವಾಯಿ ಅವರು ದೇಶದ 52ನೆಯ ಸಿಜೆಐ ಆಗಿ ಮೇ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
2019ರ ಮೇ 24ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಗವಾಯಿ ಅವರಿಗೆ ಸಿಜೆಐ ಆಗಿ ಆರು ತಿಂಗಳಿಗೂ ಹೆಚ್ಚಿನ ಅವಧಿ ಸಿಗಲಿದೆ. ಅವರು ಈ ವರ್ಷದ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ.(ಏಜೆನ್ಸೀಸ್)