ಬಿಜೆಪಿ ಸಭೆ ನಾಳೆ; ಬಿ.ಎಲ್.ಸಂತೋಷ್ ಭಾಗಿ ಕುತೂಹಲ

Santosh
Published on

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ, ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬದಿಂದಾಗಿ ರಾಜ್ಯ ಬಿಜೆಪಿ ನಾಯಕರನ್ನು ವರಿಷ್ಠರು ಕಡೆಗಣಿಸಿದ್ದಾರೆ. ವಿಧಾನಸಭೆ ಚುನಾವಣೆಯ ಸೋಲಿನಿಂದ ಹತ್ತಿರಕ್ಕೆ ಕರೆಯುತ್ತಿಲ್ಲ ಎಂಬ ತರ್ಕ, ವದಂತಿಗಳ ನಡುವೆ ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಸಭೆ ನಡೆಯಲಿದೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಗಿಯಾಗಲಿರುವ ಕಾರಣ ಮಹತ್ವ ಪಡೆದುಕೊಂಡಿದೆ. ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೂ ಆಹ್ವಾನ ನೀಡಿರುವುದು ಕುತೂಹಲ ಹೆಚ್ಚಿಸಿದ್ದು, ಸಂಘಟನೆಗೆ ತುರ್ತಾಗಿ ಕಾಯಕಲ್ಪ ನೀಡುವ ಬಗ್ಗೆ ನೇರ ಇಲ್ಲವೇ ಪರೋಕ್ಷ ಸಂದೇಶ ನೀಡುವ ಸಾಧ್ಯತೆಗಳಿವೆ.

ಲೋಕಸಭೆ ಚುನಾವಣೆ ಪೂರ್ವ ತಯಾರಿ ಭಾಗವಾಗಿ ನಡೆಯಲಿರುವ ಸೆ.1ರಿಂದ ಮತದಾರ ಚೇತನ ಅಭಿಯಾನಕ್ಕೆ ಸ್ಪಷ್ಟ ದಿಕ್ಸೂಚಿ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬೂತ್ ಪರಿಶೀಲನೆ ಉದ್ದೇಶ, ಮತದಾರರ ಯಾದಿ ಪರಿಷ್ಕರಣೆ, ಬೂತ್ ಸಮಿತಿಗಳ ಪುನರ್ ರಚನೆ ಮುಂತಾದವುಗಳ ಮಾಹಿತಿಯನ್ನು ಬಿ.ಎಲ್.ಸಂತೋಷ್ ಹಂಚಿಕೊಂಡು, ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮತದಾರರ ಯಾದಿ ಪರಾಮರ್ಶೆ ಪ್ರಾಮುಖ್ಯತೆ, ಮನೆ ಮನೆಗೆ ಭೇಟಿಯಿತ್ತು ಅಡ್ಡ ತಪಾಸಣೆ, ಸೇರ್ಪಡೆ ಅಥವಾ ತೆಗೆದು ಹಾಕುವ ಕುರಿತು ಜನ ಜಾಗೃತಿ ಅಗತ್ಯತೆಯನ್ನು ತಿಳಿಸಿ, ಸಂಘಟನಾ ಕಾರ್ಯವೈಖರಿ ಬಗ್ಗೆ ವಿಮರ್ಶಿಸಿ, ಹುರುಪು ತುಂಬುವ ಸಲಹೆಗಳನ್ನು ನೀಡಬಹುದು.

ಪೂರ್ವನಿಗದಿತ ಕಾರ್ಯಕ್ರಮಗಳಿಗೆ ಒಪ್ಪಿಕೊಂಡಿರುವ ಕಾರಣ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ, ಕಣ್ಣಿನ ಶಸಚಿಕಿತ್ಸೆಗೆ ಒಳಪಡಲಿರುವ ಮಾಜಿ ಬಸವರಾಜ ಬೊಮ್ಮಾಯಿ ಈ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net