ನಗರ ಪಟ್ಟಣಗಳ ಅನಧಿಕೃತ ಮನೆ, ನಿವೇಶನಗಳಿಗೆ ಬಿ-ಖಾತಾ: ಸಚಿವ ಕೃಷ್ಣಬೈರೇಗೌಡ ಮಾಹಿತಿ | Land and Aadhar seeding almost complete

Krishnabairegowda
Published on

ಬೆಂಗಳೂರು ನಗರ-ಪಟ್ಟಣ ಸ್ಥಳೀಯ ವ್ಯಾಪ್ತಿಯಲ್ಲಿ ಅನಧಿಕೃತ ಮನೆ, ನಿವೇಶನಗಳ ಮಾಲೀಕರಿಗೆ ಬಿ-ಖಾತಾ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಒಂದು ಬಾರಿಗೆ ಅನ್ವಯಿಸಿ ಇ-ಖಾತಾಗೆ ಸಮಾನಾಂತರವಾದ ಬಿ-ಖಾತಾ ನೀಡಲಿದೆ.

ವಿಕಾಸಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಈ ವಿಷಯ ತಿಳಿಸಿ, ಅನಧಿಕೃತ ಮನೆ/ನಿವೇಶನಗಳ ಮಾಲೀಕರು ಇದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ, ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಆನ್‌ಲೈನ್ ಮುಖೇನ ಬಿ-ಖಾತಾ (ಇ-ಆಸ್ತಿ) ತಲುಪಲಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಾಜ್ಯವ್ಯಾಪಿ ಅಭಿಯಾನ ನಡೆಯಲಿದೆ ಎಂದರು.

ಬೆಂಗಳೂರು ಹೊರತುಪಡಿಸಿ ನಗರ-ಪಟ್ಟಣಗಳಲ್ಲಿ ಒಟ್ಟು 55 ಲಕ್ಷ ಆಸ್ತಿ (ಮನೆ/ನಿವೇಶನ)ಗಳಿಗೆ ಇ-ದಾಖಲೆಯಿದೆ. ಉಳಿದ 34 ಲಕ್ಷ ಆಸ್ತಿಗಳು ಯಾವುದೇ ಖಾತೆಗಳಿಲ್ಲ. ಹೀಗಾಗಿ ಸಿಎಂ ಸೂಚನೆಯಂತೆ ಒಂದು ಬಾರಿಗೆ ಇಂತಹ ಆಸ್ತಿಗಳಿಗೆ ಬಿ-ಖಾತೆಗೆ ಸಮಾನಾಂತರವಾದ ಇ-ಖಾತಾ ವಿತರಿಸಲು ಸೂಚಿಸಿದ್ದಾರೆ.

ಫೆ.10ರಿಂದ ಅಭಿಯಾನ

ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳದೇ ಈ ಜವಾಬ್ದಾರಿಯಾಗಿದೆ. ಆದರೂ ಅಭಿಯಾನ ರೂಪದಲ್ಲಿ ವೇಗವಾಗಿ ನಿರ್ವಹಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಮೇಲ್ವಿಚಾರಣೆ ಒಪ್ಪಿಸಿ, ಮೂರು ತಿಂಗಳ ಗಡುವು ವಿಧಿಸಲಾಗಿದೆ ಎಂದು ತಿಳಿಸಿದರು.

ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನೀಡುವುದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ನಿಯಮಗಳ ಕರಡು ರಚಿಸಿ ಪ್ರಕಟಿಸಿದೆ. ಈ ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಅಥವಾ ಸಲಹೆ-ಸೂಚನೆ ಸಲ್ಲಿಸಲು ಫೆ.2 ಕೊನೇ ದಿನವಾಗಿದೆ.

ಸಲ್ಲಿಕೆಯಾದ ಆಕ್ಷೇಪಣೆ ಪರಿಶೀಲಿಸಿ ೆ.10ರೊಳಗೆ ಅಂತಿಮ ಅಧಿಸೂಚನೆ ಪ್ರಕಟಿಸಲಿದೆ. ನಂತರ ಫೆ.10ರಿಂದ ನಗರ-ಪಟ್ಟಣಗಳ ವ್ಯಾಪ್ತಿಯ 34 ಲಕ್ಷ ಆಸ್ತಿಗಳಿಗೆ ಖಾತಾ ವಿತರಿಸಲಾಗುತ್ತದೆ. ಅನಧಿಕೃತ ಬಡಾವಣೆಗಳಲ್ಲಿ ನಿವೇಶನ/ ಮನೆಗಳನ್ನು ಖರೀದಿಸಿದವರಲ್ಲಿ ಕ್ರಯಪತ್ರವಿದೆ.

ಇ-ಆಸ್ತಿ ಪತ್ರ ಲಭಿಸುವುದರಿಂದ ಒಂದಿಷ್ಟು ನಿರಾಳರಾಗಲಿದ್ದಾರೆ. ಅನಧಿಕೃತ ಮನೆ, ನಿವೇಶಗಳಿಗೆ ಅಗತ್ಯ ಸವಲತ್ತು ಕೊಟ್ಟು ತೆರಿಗೆ ವಂಚಿತವಾಗಿದ್ದ ನಗರ-ಸ್ಥಳೀಯ ಸಂಸ್ಥೆಗಳಿಗೆ ಅನುಕೂಲವಾಗಲಿದೆ.

ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ಮುಖೇನ ಭಾಗಶಃ ಮಾಲೀಕತ್ವ ಲಭಿಸಲಿದೆ. ಹಾಗೆಯ ನಗರ- ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ರೂಪದ ಆದಾಯವೂ ವೃದ್ಧಿಸಲಿದೆ. ಇದಾದ ಬಳಿಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇ-ಖಾತಾ ವಿತರಿಸಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕೃಷ್ಣಬೈರೇಗೌಡ ವಿವರಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶನ

ಉತ್ತರಪ್ರದೇಶದ ವ್ಯಾಜ್ಯವೊಂದರಲ್ಲಿ ಸುಪ್ರೀಂ ಕೋರ್ಟ್ ಡಿ.17ರಂದು ನೀಡಿದ ತೀರ್ಪಿನ ಪ್ರಕಾರ ಎ-ಖಾತಾ ಮಾತ್ರ ವಿತರಿಸಬೇಕೆಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಸೂಚಿಸಿದೆ. ಸುಪ್ರೀಂ ಕೋರ್ಟ್ ಹೊಸದಾಗಿ ಕಾನೂನು ಅಥವಾ ಆದೇಶ ಹೊರಡಿಸಿಲ್ಲ. ಅನಧಿಕೃತ, ಅಕ್ರಮ ಬಡಾವಣೆ, ನಿವೇಶನಗಳು, ನಿರ್ಮಾಣ ನಿಯಂತ್ರಿಸಲು ಎಲ್ಲ ರಾಜ್ಯಗಳು ಹೊಂದಿರುವ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾಗೆ ಸಮಾನಾಂತರ ಇ-ಖಾತಾ ವಿತರಿಸುತ್ತಿದ್ದು, ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಿದೆ. ಅನಧಿಕೃತ ಆಸ್ತಿಗಳ ಮಾಲೀಕರಿಗೆ ಹೊರೆಯಾದೀತು ಎಂಬ ಕಾರಣಕ್ಕೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.

ವಿ ಎ ಗಳಿಗೆ ಪ್ರೋತ್ಸಾಹಧನ

ರಾಜ್ಯದಲ್ಲಿ ಈವರೆಗೆ 2.12 ಕೋಟಿ ಜಮೀನುಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿದೆ. 51.13 ಲಕ್ಷ ಜಮೀನುಗಳ ಮಾಲೀಕರು ಮೃತಪಟ್ಟಿರುವ ಕಾರಣ ಆಧಾರ್ ಜೋಡಣೆ ಸಾಧ್ಯವಾಗಿಲ್ಲ. ಸರ್ವೇ ಪ್ರಗತಿಯಲ್ಲಿದ್ದು, ನಂತರ ಆಧಾರ್ ಸಂಖ್ಯೆ ಜೋಡಿಸಲಾಗುತ್ತದೆ.

ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆಗೆ ಸ್ಪಂದಿಸಿದ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸೇವಕರಿಗೆ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ. ಆಯಾ ಜೋಡಣೆ ಪ್ರಮಾಣ ಆಧರಿಸಿ ಪ್ರೋತ್ಸಾಹಧನ ಮೊತ್ತ ನಿಗದಿಯಾಗುತ್ತದೆ.

ಇದಕ್ಕಾಗಿ 4.50 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. ಕ್ರಿಯಾಶೀಲ, ದಕ್ಷತೆಯಿಂದ ಕರ್ತವ್ಯ ನಿರ್ವಹಣೆಗೆ ಪ್ರಶಂಸೆ, ತಮ್ಮ ಜೇಬಿನಿಂದ ಹೆಚ್ಚುವರಿ ವೆಚ್ಚ ಭರಿಸಿದವರಿಗೆ ನೆರವಾಗಲು ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಕೃಷ್ಣಬೈರೇಗೌಡ ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net