14 ವರರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಲಿ? ಗೊಂದಲದಲ್ಲಿದ್ದೇನೆ ಸಹಾಯ ಮಾಡಿ ಎಂದ ಯುವತಿ

Young Girl Appeal
Published on

ನವದೆಹಲಿ: ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿಮಾಡಿರುವ ಪೋಸ್ಟ್ ಒಂದು ಭಾರೀ ಸಂಚಲನ ಮೂಡಿಸುತ್ತಿದೆ. ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ 14 ವರಗಳಲ್ಲಿ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಲು ಸಹಾಯ ಕೋರಿ ಯುವತಿ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಇದನ್ನು ನೋಡಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ.

ಬಿಕಾಂ ಓದಿರುವ 29 ವರ್ಷದ ಯುವತಿ ಸದ್ಯ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಾಳೆ. ಜನಪ್ರಿಯ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಯುವತಿಗೆ 14 ವರರ ಪರಿಚಯವಾಗಿದ್ದು, ಅವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದಾಳೆ.

@TheSquind ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಿದೆ. ನಾನು 29 ವರ್ಷದ ಬಿಕಾಂ ಪದವೀಧರೆ. ಸದ್ಯಕ್ಕೆ ನಾನು ಯಾವುದೇ ಕೆಲಸ ಮಾಡುತ್ತಿಲ್ಲ. ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ ಮೂಲಕ 14 ಯುವಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಆದರೆ, ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೇನೆ. ನೀವು ನನಗೆ ಸಹಾಯ ಮಾಡಿ ಎಂದು ನೆಟ್ಟಿಗರನ್ನು ಮನವಿ ಮಾಡಿದ್ದಾಳೆ.

ಪರಿಚಿತ 14 ಯುವಕರ ಸಂಬಳ ಹಾಗೂ ಅವರು ಕೆಲಸ ಮಾಡುವ ಕಂಪನಿಯ ಮಾಹಿತಿಯನ್ನು ಯುವತಿ ಪೋಸ್ಟ್​ ಮಾಡಿದ್ದಾಳೆ. ಅದರ ಪ್ರಕಾರ ಆಕೆಗೆ ಪರಿಚಯವಾಗಿರುವ 14 ವರರೂ 14 ರಿಂದ 45 ಲಕ್ಷ ರೂ. ವರೆಗೂ ವಾರ್ಷಿಕ ಸಂಬಳ ಪಡೆಯುತ್ತಾರೆ. ಅವರೆಲ್ಲರೂ ಬೈಜಸ್, ಫ್ಲಿಪ್‌ಕಾರ್ಟ್, ಡೆಲಾಯ್ಟ್ ಮತ್ತು ಟಿಸಿಎಸ್‌ನಂತಹ ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಪೋಸ್ಟ್ ವೈರಲ್ ಆದ ನಂತರ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಪದವಿ ಮುಗಿದ ಮೇಲೆ ನೀನೇಕೆ ನೌಕರಿ ಮಾಡುತ್ತಿಲ್ಲ ಎಂದು ಕೆಲವರು ಕೇಳಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಪುರುಷರು ಅನೇಕ ಮಹಿಳೆಯರೊಂದಿಗೆ ಸಂಪರ್ಕದಲ್ಲಿರುವುದು ಸಹಜ ಆದರೆ ಅವರ ಪ್ರಾಮಾಣಿಕತೆಯನ್ನು ಪದಗಳಲ್ಲಿ ತಿಳಿದುಕೊಳ್ಳುವುದು ಸಹಜ ಎಂದು ಸಲಹೆ ನೀಡಲಾಗಿದೆ. ಅದೇನೇ ಇರಲಿ, ಸಂಗಾತಿ ಆಯ್ಕೆ ವಿಚಾರದಲ್ಲಿ ಯುವತಿಯೊಬ್ಬಳು ಧೈರ್ಯವಾಗಿ ನೆಟ್ಟಿಗರ ಸಲಹೆ ಕೇಳಿರುವುದು ಕುತೂಹಲ ಮೂಡಿಸಿದೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net