ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ: ಟ್ವಿಟರ್​ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

Manipur Incident
Published on

ಇಂಫಾಲ್​​: ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಆಘಾತಕಾರಿ ವಿಡಿಯೋ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಟ್ವಿಟರ್​ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಮತ್ತು ವಿಡಿಯೋವನ್ನು ತೆಗೆಯುವಂತೆ ತಾಕೀತು ಮಾಡಿದೆ.

ಮೇ 4ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿಡಿಯೋ ವೈರಲ್​ ಆಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಟ್ವಿಟರ್​ ವೈರಲ್​ ಮಾಡಿರುವ ಈ ವಿಡಿಯೋ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ವಿಡಿಯೋ ತೆಗೆಯುವಂತೆ ಟ್ವಿಟರ್​ಗೆ ತಾಕೀತು ಮಾಡಿರುವ ಕೇಂದ್ರ ಸರ್ಕಾರ, ವಿಡಿಯೋ ವೈರಲ್​ ಮಾಡಿದ್ದಕ್ಕೆ ಕ್ರಮ ಜರುಗಿಸುವ ಸಾಧ್ಯತೆ ಇದೆ.

ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಡಿಯೋ ಹರಿದಾಡಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಟ್ವಿಟರ್​ ವಿರುದ್ಧ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವಿಡಿಯೋ ಮತ್ತಷ್ಟು ಪ್ರಸಾರವಾಗದಂತೆ ನೋಡಿಕೊಳ್ಳಲು ಕೇಂದ್ರ ಐಟಿ ಸಚಿವಾಲಯವು ಜಾಲತಾಣ ವೇದಿಕೆಗಳಲ್ಲಿ ನಿರಂತರ ಕೆಲಸ ಮಾಡುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರಿಬ್ಬರನ್ನು ಮಣಿಪುರದಲ್ಲಿ ಪುರುಷರ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡಿದೆ. ಅಲ್ಲದೆ, ಮಹಿಳೆಯರ ಮೇಲೆ ಗ್ಯಾಂಗ್​ರೇಪ್​ ಸಹ ನಡೆದಿದೆ ಎನ್ನಲಾಗಿದೆ. ಈ ಘಟನೆ ಮೇ 4ರಂದು ಮಣಿಪುರ ರಾಜಧಾನಿ ಇಂಫಾಲ್​ನಿಂದ 35 ಕಿ.ಮೀ. ದೂರದಲ್ಲಿರುವ ಕೊಂಗ್​ಪೊಕ್ಪಿ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಪರಿಶಿಷ್ಟ ಪಂಗಡಗಳ (ST) ಸ್ಥಾನಮಾನಕ್ಕಾಗಿ ಮೈತೀಸ್​ ಸಮುದಾಯ ಇಟ್ಟಿರುವ ಬೇಡಿಕೆಯ ಕುರಿತು ಮಣಿಪುರದ ಮೈತೀಸ್​ ಮತ್ತು ಕುಕಿ ಬುಡಕಟ್ಟುಗಳ ನಡುವೆ ಘರ್ಷಣೆಗಳು ಉಂಟಾಗಿರುವ ನಡುವೆಯೇ ಈ ಭಯಾನಕ ಘಟನೆಯೂ ನಡೆದಿದೆ. ಇದೇ ವಿಚಾರಕ್ಕೆ ಮಣಿಪುರ ರಾಜ್ಯ ಅನೇಕ ಸಂಘರ್ಷಗಳಿಗೆ ಕಾರಣವಾಗಿದ್ದು, ಅಲ್ಲಿನ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತೆ ಇದೆ.

ಮಣಿಪುರದ ಹಿಂಸಾಚಾರದಲ್ಲಿ ಈವರೆಗೂ 120 ಮಂದಿ ಅಸುನೀಗಿದ್ದು, ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಿದ್ದು, ಪರಿಹಾರ ಶಿಬಿರಗಳಲ್ಲಿ ಆಶ್ರಯವನ್ನು ಪಡೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ನಿನ್ನೆಯಿಂದ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ. ನಾವು ಆರೋಪಿಗಳನ್ನು ಗುರುತಿಸಿದ್ದೇವೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net