ಬಿ. ಶೆಟ್ಟಿಗೇರಿಯಲ್ಲಿ ಸ್ವಚ್ಛತಾ ಅಭಿಯಾನ

22 vpt. 1.2
Published on

ವಿರಾಜಪೇಟೆ : ವಿರಾಜಪೇಟೆ ಕಾವೇರಿ ಕಾಲೇಜಿನ ವತಿಯಿಂದ ಬಿ.ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನ ಶುಕ್ರವಾರ ಶಿಬಿರಾರ್ಥಿಗಳು ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ನಡೆಸಿದರು.

ಅಭಿಯಾನಕ್ಕೆ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಪರಮೇಶ್ ಮಾತನಾಡಿ, ಯುವ ಜನತೆ ದೇಶದ ಶಕ್ತಿ. ಯುವಜನರು ಬದಲಾದರೆ ಸಮಾಜವು ಬದಲಾಗುತ್ತದೆ. ಪ್ರತಿಯೊಬ್ಬರೂ ಅವರವರ ಜವಾಬ್ದಾರಿ ಅರಿತು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿ ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು. ಹಾಗೆಯೇ ಒಣಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಪೌರಕಾರ್ಮಿಕರಿಗೆ ನೀಡಿ ಸಹಕರಿಸಬೇಕು. ಹಸಿ ಕಸವನ್ನು ಹೆಚ್ಚಿನ ಪ್ರಮಾಣದಲ್ಲಿ ಮರು ಬಳಕೆ ಮಾಡುವ ಕೆಲಸ ಹೆಚ್ಚು ಹೆಚ್ಚು ನಡೆದಾಗ ತ್ಯಾಜ್ಯದ ಪ್ರಮಾಣವೂ ಕಡಿಮೆಯಾಗುತ್ತದೆ. ನೈರ್ಮಲ್ಯ ಹಾಗೂ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ ಮಾತನಾಡಿ, ನಾವು ದೈಹಿಕ ಸ್ವಚ್ಛತೆಗೆ ಎಷ್ಟು ಒತ್ತು ನೀಡುತ್ತೇವೆಯೇ ಹಾಗೆಯೇ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೂ ನಾವು ಅಷ್ಟೇ ಪ್ರಾಮುಖ್ಯ ನೀಡಬೇಕು. ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿದ್ದರೆ ನಮ್ಮ ಆರೋಗ್ಯ ಸಹ ಉತ್ತಮವಾಗಿರುತ್ತದೆ. ಪ್ರತಿ ಊರಿನಲ್ಲೂ ಸಂಘ, ಸಂಸ್ಥೆಗಳು ಸ್ವಯಂ ಸೇವಕರು ಇಂತಹ ಅಭಿಯಾನಗಳನ್ನು ನಡೆಸಿದರೆ ಗ್ರಾಮಗಳು ಸ್ವಚ್ಛವಾಗುತ್ತದೆ ಎಂದರು.

ನಂತರ ಕಾವೇರಿ ಕಾಲೇಜಿನ ಸ್ವಯಂಸೇವಕರು ಬಿ.ಶೆಟ್ಟಿಗೇರಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಸಂಚರಿಸಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಪೇಪರ್, ಬಾಟಲಿಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಪಂಚಾಯಿತಿಯ ಕಸ ಸಂಗ್ರಹಣ ವಾಹನಕ್ಕೆ ನೀಡಿದರು.

ಗ್ರಾಮ ಪಂಚಾಯಿತಿ ವತಿಯಿಂದ ಲಘು ಉಪಾಹಾರ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net