

| ಅಶೋಕ ಶೆಟ್ಟರ ಬಾಗಲಕೋಟೆ
‘ಗರಡಿ’ ಸಿನಿಮಾ ತಂಡ ಇದೀಗ ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಬೀಡುಬಿಟ್ಟಿದೆ. 30ಕ್ಕೂ ಅಧಿಕ ಹಿರಿ ಕಿರಿ ಪೈಲ್ವಾನರೊಂದಿಗೆ ಜಗಜಟ್ಟಿ ಉಸ್ತಾದ್ ಆಗಿ ಸಚಿವ ಬಿ.ಸಿ. ಪಾಟೀಲ್ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಮೇಣಬಸದಿ, ಅಗಸ್ಱ ಹೊಂಡ, ಭೂತನಾಥ ಮಂದಿರ ಸೇರಿ ವಿವಿಧೆಡೆ ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಬಿ.ಸಿ ಪಾಟೀಲ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ.
ಎರಡು ದಿನಗಳ ಶೂಟಿಂಗ್ನಲ್ಲಿ ಭಾಗವಹಿಸಿದ ಅವರು, ತಮ್ಮ ಪಾಲಿನ ಕೆಲಸ ಮುಗಿಸಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಅದಕ್ಕೂ ಮೊದಲು ಮಾತನಾಡಿದ ಪಾಟೀಲ್, ‘ಕಳೆದ ಆರೇಳು ವರ್ಷದಿಂದ ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಚುನಾವಣೆ, ರಾಜಕೀಯ ವಿಚಾರವಾಗಿ ನಟನೆಯತ್ತ ಮುಖ ಮಾಡಲು ಆಗಿರಲಿಲ್ಲ. ಯೋಗರಾಜ್ ಭಟ್ ಒಂದೊಳ್ಳೆ ಕಥೆ ತಂದರು. ಈ ಮೊದಲು ಗರಡಿ ಮುಖ್ಯಸ್ಥನ ಪಾತ್ರದಲ್ಲಿ ಪ್ರಕಾಶ್ ರಾಜ್ ಇಲ್ಲವೆ ಅನುಪಮ್ ಖೇರ್ ಅವರನ್ನು ಕರೆತರುವ ಕೆಲಸವಾಗಿತ್ತು. ಅದು ಆಗಲಿಲ್ಲ. ಕೊನೆಗೆ ನಾನೇ ಮಾಡಬೇಕಾಯಿತು. ಚಿತ್ರದಲ್ಲಿ ನನ್ನದು ಗರಡಿ ರಂಗಣ್ಣನ ಪಾತ್ರ. ಕುಸ್ತಿ ಜತೆಗೆ ಸ್ನೇಹ, ಪ್ರೀತಿಯೂ ಸಿನಿಮಾದಲ್ಲಿ ಕಾಣಿಸಲಿದೆ’ ಎಂದರು.
ಸದ್ಯ 15 ದಿನಗಳ ಶೂಟಿಂಗ್ ಮುಗಿಸಿರುವ ತಂಡ, ಮುಂದಿನ 45 ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಲೆಕ್ಕಾಚಾರದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್ ವೇಳೆಗೆ ಸಿನಿಮಾ ಬಿಡುಗಡೆ ಆಗಲಿದೆ. ಯಶಸ್ ಸೂರ್ಯ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಸೋನಲ್ ಮೊಂತೆರೋ ನಾಯಕಿ. ವಿಶೇಷ ಪಾತ್ರದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಸಹ ನಟಿಸಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದು, ನಾಲ್ಕು ಹಾಡುಗಳಿವೆ. ನಿರಂಜನ ಬಾಬು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.