ಸಂಪಾದಕೀಯ | ತೊಡಕುಗಳನ್ನು ನಿವಾರಿಸಿ; ಸಮಸ್ಯೆ ಬಗೆಹರಿಸದೆ ಯೋಜನೆ ಯಶಸ್ವಿಯಾಗಲು ಹೇಗೆ ಸಾಧ್ಯ?

Editorial
Published on

ಆರೋಗ್ಯ ವಲಯಲ್ಲಿರುವ ಸಮಸ್ಯೆ, ಸವಾಲುಗಳು ಹಲವು. ಇತ್ತೀಚಿನ ವರ್ಷಗಳಲ್ಲಂತೂ ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿ ಪರಿಣಮಿಸಿದ್ದು, ರೋಗಿಗಳು ಚಿಕಿತ್ಸೆಗಿಂತ ಅದಕ್ಕೆ ತೆರಬೇಕಾದ ಹಣದ ಬಗ್ಗೆಯೇ ಹೆಚ್ಚು ಭಯಭೀತರಾಗುತ್ತಿದ್ದಾರೆ. ಅದಕ್ಕೆಂದೆ, ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಅದೆಷ್ಟೋ ಜನ ಪರಿಸ್ಥಿತಿ ಗಂಭೀರವಾದ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆಯ ಸಮಸ್ಯೆಯಾದರೆ, ಖಾಸಗಿ ಆಸ್ಪತ್ರೆಗಳ ಶುಲ್ಕ ಎಲ್ಲರಿಗೂ ಎಟುಕದು. ಆರೋಗ್ಯ ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ನಡೆಯುತ್ತಿರುವುದು ಹೌದಾದರೂ, ಈ ದಾರಿಯಲ್ಲಿ ಕ್ರಮಿಸಬೇಕಾದ ದೂರ ಬಹಳ. ಇಂಥ ಸುಧಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಆರೋಗ್ಯ ಕುರಿತ ಸಮಗ್ರ ವಿವರಗಳುಳ್ಳ ಡಿಜಿಟಲ್ ಆರೋಗ್ಯ ಕಾರ್ಡ್ ವಿತರಿಸುವ ‘ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’ ಯೋಜನೆಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಪ್ರಸಕ್ತ ಇದನ್ನು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಡಿಜಿಟಲ್ ಆರೋಗ್ಯ ಗುರುತು ಚೀಟಿ ವ್ಯಕ್ತಿಯ ಆರೋಗ್ಯ ಖಾತೆಯಾಗಿರಲಿದೆ. ಆರೋಗ್ಯದ ಸಮಗ್ರ ವಿವರಗಳನ್ನು ಇದು ಹೊಂದ ಲಿದ್ದು, ಮೊಬೈಲ್ ಅಪ್ಲಿಕೇಶನ್​ನಲ್ಲೂ ವೀಕ್ಷಿಸಬಹುದಾಗಿದೆ. ಈ ಯೋಜನೆ ರೋಗಿಗಳ ರಕ್ಷಣೆ, ಉತ್ತಮ ಚಿಕಿತ್ಸೆ ಒದಗಿಸುವುದಕ್ಕೆ ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸಲಿದೆ. ಆರೋಗ್ಯ ದಾಖಲೆಗಳು ಡಿಜಿಟಲ್ ಸ್ವರೂಪದಲ್ಲಿ ರಕ್ಷಿಸಲಾಗುತ್ತದೆ. ಮುಖ್ಯವಾಗಿ, ಈ ಕ್ರಮದಿಂದ ವೈದ್ಯರು, ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಸಂಸ್ಥೆಗಳ ಮೇಲಿನ ಒತ್ತಡ ತಗ್ಗಲಿದೆ. ಜನರೂ ಒಂದು ಕ್ಲಿಕ್ ಮೂಲಕ ಆರೋಗ್ಯಸೇವೆ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಎಲ್ಲ ಕ್ಷೇತ್ರಗಳು ತಂತ್ರಜ್ಞಾನಕ್ಕೆ ತೆರೆದುಕೊಂಡು, ಸುಧಾರಣೆಯ ಹಾದಿಯಲ್ಲಿ ದಾಪುಗಾಲು ಇಡುತ್ತಿರುವಾಗ ಆರೋಗ್ಯ ಕ್ಷೇತ್ರದಲ್ಲೂ ಈ ಬಗೆಯ ಬದಲಾವಣೆ ಅಗತ್ಯವಾಗಿತ್ತು. ಮುಂಬರುವ ದಿನಗಳಲ್ಲಿ ಈ ಯೋಜನೆ ದೇಶಾದ್ಯಂತ ವಿಸ್ತರಣೆಯಾದ ಬಳಿಕವೇ, ಜನಸಾಮಾನ್ಯರವರೆಗೆ ತಲುಪಲು ಸಾಧ್ಯವಾಗಲಿದೆ. ಹೊಸ ಯೋಜನೆಗಳು, ಸುಧಾರಣಾ ಕ್ರಮಗಳು ಅಗತ್ಯವಾದರೂ, ಅವುಗಳ ಸಮರ್ಪಕ ಅನುಷ್ಠಾನವೂ ಅಷ್ಟೇ ಮುಖ್ಯ. ತೊಡಕುಗಳನ್ನು, ಪ್ರಮುಖ ಸಮಸ್ಯೆಗಳನ್ನು ನಿವಾರಿಸದೆ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆ ಜಾರಿಗೆ ಬಂದು ಮೂರು ವರ್ಷವಾದರೂ ತುರ್ತು ಚಿಕಿತ್ಸೆ ಸೇರಿ ಅಗತ್ಯ ಸೇವೆ ಪಡೆಯಲು ಫಲಾನುಭವಿಗಳು ಪರದಾಡುತ್ತಿರುವುದು ವಿಪರ್ಯಾಸ. ಈ ಬಗ್ಗೆ ಇತ್ತೀಚೆಗಷ್ಟೇ ‘ವಿಜಯವಾಣಿ’ ಸಮಗ್ರ ವರದಿ ಮಾಡುವುದರ ಮೂಲಕ ವ್ಯವಸ್ಥೆಯ ಗಮನ ಸೆಳೆದಿತ್ತು. ಕಳೆದ ಮೂರು ವರ್ಷಗಳಲ್ಲಿ ಯೋಜನೆಯಡಿ 1.47 ಕೋಟಿಗೂ ಅಧಿಕ ಮಂದಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ಅನುವಾಗುವಂತೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳ ಮನವೊಲಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಹೀಗಾಗಿ ತುರ್ತಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಗಿದೆ. ಹಾಗಾದರೆ ಯೋಜನೆ ರೂಪಿಸಿ ಫಲವೇನು? ಹಾಗಾಗಿ, ಕೊರತೆಗಳನ್ನು ನಿವಾರಿಸಿ, ಅನುಷ್ಠಾನದ ಹಾದಿಯನ್ನು ಪ್ರಶಸ್ತಗೊಳಿಸಿದರೆ ಮಾತ್ರ ನೈಜ ಸಾರ್ಥಕತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net