

ಭಾರತದ ಗ್ರಾಮೀಣ ಭಾಗದಲ್ಲೂ ಜನರಿಗೆ ಅರಿತಿರುವ ವಿಷಯವೆಂದರೆ ಆಯುರ್ವೆದದ ಔಷಧ ಅಥವಾ ಅದರದ್ದೇ ಜನಪದೀಯ ಮುಖವಾಗಿರುವ ನಾಟೀ ಸಸ್ಯೌಷಧ ಚಿಕಿತ್ಸೆಯಿಂದ ಮೂತ್ರಕಲ್ಲನ್ನು ಗುಣಪಡಿಸಬಹುದು ಎಂಬ ವಾಸ್ತವ ಅನುಭವ. ಅಸಹನೀಯವಾದ ನೋವು ಇದ್ದಾಗ ಅದನ್ನು ತಡೆಯಲಾರದೆ ಲೀಥೋಟ್ರಿಪ್ಸಿ ಅಥವಾ ಶಸ್ತ್ರಚಿಕಿತ್ಸೆಯ ಮೊರೆ ಹೋಗುವವರೂ ಇದ್ದಾರೆ. ಇವೆರಡು ಚಿಕಿತ್ಸೆಯ ಪರಿಮಿತಿ ಎಂದರೆ ಮೂತ್ರಕಲ್ಲು ಪುನಃ ಪುನಃ ಉತ್ಪತ್ತಿಯಾಗುವುದನ್ನು ಇದು ತಡೆಯುವುದಿಲ್ಲ ಎಂಬ ಅಂಶ. ಒಂದು ಕಡೆ ಕಸವಿದ್ದಾಗ ಅದನ್ನು ಗುಡಿಸಿ ತೆಗೆದು ಸ್ಥಳವನ್ನು ಸ್ವಚ್ಛಗೊಳಿಸಿದರೆ ಸಾಕಾಗುವುದಿಲ್ಲ. ಸ್ವಲ್ಪಹೊತ್ತು ಕಳೆದರೆ ಮತ್ತೆ ಅಲ್ಲಿ ಕಸ ಸಂಗ್ರಹವಾಗುತ್ತದೆ.
ಯಾವ ಕಾರಣದಿಂದ ಅಥವಾ ಕಸದ ಮೂಲ ಯಾವುದು ಎಂಬುದನ್ನು ತಿಳಿದುಕೊಂಡು ಅದನ್ನು ಸರಿಪಡಿಸಿದರೆ ಮಾತ್ರ ಧೂಳು ಅಥವಾ ಕಸ ಬಂದು ಶೇಖರಣೆಯಾಗುವುದನ್ನು ತಡೆಯಬಹುದು. ಅಂತೆಯೇ ಮೂತ್ರದ ಕಲ್ಲುಗಳು ಕೂಡ. ಮೂತ್ರಕಲ್ಲನ್ನು ಹೊರತೆಗೆದಾಕ್ಷಣ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುವುದಿಲ್ಲ. ಅದು ಶಸ್ತ್ರಚಿಕಿತ್ಸೆಗಿರುವ ಅತಿದೊಡ್ಡ ನ್ಯೂನತೆ. ಯಾವುದೇ ವಿಧದ ಮೂತ್ರ ಕಲ್ಲು ಉಂಟಾದರೂ ಮೂತ್ರಕಲ್ಲು ಉತ್ಪತ್ತಿಯ ಪ್ರಕ್ರಿಯೆಯನ್ನೇ ನಿಲ್ಲಿಸಿ ಸರಿಗೊಳಿಸುವುದು ಹಾಗೂ ಅದೇ ಚಿಕಿತ್ಸಾ ವಿಧಾನದಿಂದ ಈಗಾಗಲೇ ಉತ್ಪತ್ತಿಯಾಗಿರುವ ಮೂತ್ರಕಲ್ಲನ್ನು ಹೊರ ಹಾಕುವುದು- ಇವೆರಡೂ ಕಾರ್ಯ ಏಕಕಾಲ ದಲ್ಲಿ ನಡೆದರೆ ಮಾತ್ರ ಮೂತ್ರಕಲ್ಲು ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುತ್ತದೆ. ಅತಿದೊಡ್ಡಗಾತ್ರದ ಮೂತ್ರಪಿಂಡ ಕಲ್ಲು ಆಗಿದ್ದಾಗ ಆರಂಭದಲ್ಲಿ ಶಸ್ತ್ರಚಿಕಿತ್ಸೆಯನ್ನು ಅವಲಂಬಿಸಿ, ಬಳಿಕ ಪುನಃ ಅಶ್ಮರೀ ಉತ್ಪತ್ತಿಯಾಗದಂತೆ ಆಯುರ್ವೆದ ಔಷಧಗಳನ್ನು ಸೇವಿಸು ವುದು ಪ್ರಶಸ್ತವಾಗಿರುತ್ತದೆ.
ಆಯುರ್ವೆದದಲ್ಲಿ ಹೇಳಿರುವ ವೈಜ್ಞಾನಿಕ ಔಷಧ ಚಿಕಿತ್ಸೆಯನ್ನು ನುರಿತ ವೈದ್ಯರಿಂದ ಪಡೆದುಕೊಂಡು ರೋಗವನ್ನು ಗುಣಪಡಿಸಿಕೊಳ್ಳುವುದು ಅತ್ಯಂತ ಪ್ರಶಸ್ತ ಮಾರ್ಗ. ಜನಜನಿತವಾಗಿರುವ ನೂರಾರು ಮನೆಮದ್ದುಗಳ ಉಪಯೋಗವು ಒಮ್ಮೆಗೆ ಮೂತ್ರಕಲ್ಲನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ. ಮೂತ್ರಪಿಂಡ ಕಲ್ಲು ಉತ್ಪತ್ತಿಗೆ ಮೊದಲು ಹೇಳಲಾದ ಕಾರಣಗಳನ್ನು ತ್ಯಜಿಸುವುದು ಮೊದಲ ಹೆಜ್ಜೆ.
ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು, ಮೂತ್ರ ವಿಸರ್ಜಿಸುವ ಬಯಕೆ ಉಂಟಾದಾಗ ಅದನ್ನು ತಡೆಯದಿರುವುದೂ ಸೇರಿದಂತೆ ಆಹಾರದಲ್ಲಿ ಅನುಸರಿಸಬೇಕಾದ ನಿಯಮ ಗಳನ್ನು ತಿಳಿದುಕೊಂಡಿದ್ದೇವೆ. ಚಿಕಿತ್ಸೆ ಪಡೆಯುತ್ತಿರುವಾಗ 90 ದಿನಗಳಲ್ಲಿ ಮೂತ್ರಕಲ್ಲು ಹೊರಹೋಯಿತೆಂದು ಇಟ್ಟುಕೊಳ್ಳಿ. 89ನೇ ದಿನ ಉದರದರ್ಶಕ ತಪಾಸಣೆ ಮಾಡಿದರೆ ಏನೂ ಫಲಿತಾಂಶ ಗೋಚರಿಸುವುದಿಲ್ಲ! ಅದೇ ತೊಂಬತ್ತನೇ ದಿನ ಮೂತ್ರದಕಲ್ಲಿರುವುದಿಲ್ಲ. ಮೂತ್ರ ಕಲ್ಲು ನಿವಾರಣೆಯಾದೊಡನೆ ಚಿಕಿತ್ಸೆ ನಿಲ್ಲಿಸಕೂಡದು.
ಮತ್ತೆ ಕಲ್ಲು ಹುಟ್ಟಿಕೊಳ್ಳದಂತೆ ಇರಲು ಬೇಕಾ ದಷ್ಟು ಕಾಲ ವೈದ್ಯರ ವಿವೇಚನೆಗೆ ಅನುಗುಣವಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು. ನೆಗ್ಗಿನಮುಳ್ಳು, ಪಾಷಾಣಭೇದ, ಕಬ್ಬಿನ ಹಾಲು, ಧರ್ಬೆಹುಲ್ಲು, ಗರಿಕೆಹುಲ್ಲು ಸೇರಿದಂತೆ ಐದು ವಿಧವಾದ ತೃಣ ಪಂಚಮೂಲಗಳು, ಹುರುಳಿಕಾಳು, ವರುಣ, ಮೊದಲಾದ ಔಷಧೀಯ ಸಸ್ಯಗಳು ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಕಪ್ಪುದ್ರಾಕ್ಷಿ ಬಳ್ಳಿಯ ಬಲಿತ ಮೂರು ಎಲೆಗಳನ್ನು ಚೆನ್ನಾಗಿ ತೊಳೆದು ತುಂಡರಿಸಿ ಸುಮಾರು 250 ಮಿಲಿ ಲೀಟರ್ ನೀರಿನಲ್ಲಿ ಹಾಕಿ ಕಾಲುಭಾಗಕ್ಕೆ ಇಳಿಯುವಷ್ಟು ಹೊತ್ತು ಸಣ್ಣ ಬೆಂಕಿಯಲ್ಲಿ ಕುದಿಸಬೇಕು. ಅದನ್ನು ಸೋಸಿ ಸಾವಯವ ಬೆಲ್ಲ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಕುಡಿಯಬೇಕು. ಬಾಳೆಯ ಗಿಡದ ಕಾಂಡದ ಮಧ್ಯದಲ್ಲಿರುವ ಬಾಳೆಯದಿಂಡು ಕೂಡ ಉಪಯುಕ್ತ. ಅದನ್ನು ಕಡೆದು ರಸ ತೆಗೆದು ಕಾಲು ಲೋಟದಷ್ಟು ಪ್ರಮಾಣವನ್ನು ದಿನಕ್ಕೆರಡು ಬಾರಿ ಆಹಾರ ಸೇವಿಸುವುದಕ್ಕಿಂತ ಮೊದಲು ಕುಡಿಯುವುದೂ ಅನುಕೂಲವೆಸಗುತ್ತದೆ. ಬಾಳೆದಿಂಡಿನ ಹಸಿ ಸಲಾಡ್ ಅಥವಾ ಪಲ್ಯ ಮಾಡಿ ಸೇವಿಸುವುದೂ ಉಪಯುಕ್ತ. ಬಾಳೆಗಿಡ ಒಮ್ಮೆ ಬಾಳೆಗೊನೆ ನೀಡಿತೆಂದರೆ ಮತ್ತೆ ಅದೇ ಗಿಡ ಪುನಃ ಫಲ ನೀಡುವುದಿಲ್ಲ.
ಭೂಮಿ ಒಳಗಿರುವ ಆ ಬಾಳೆಗಿಡದ ಗಡ್ಡೆಯಿಂದ ಆರಿಸಿಕೊಂಡು ಅದರ ರಸವನ್ನು ಕಷ್ಟದಿಂದ ಹೊರತೆಗೆದು ಅರ್ಧ ಲೋಟ ರಸಕ್ಕೆ ಎರಡು ಚಮಚದಷ್ಟು ಸಾವಯವ ಅಕ್ಕಿಯ ಪುಡಿಯನ್ನು ಹಾಗೂ ಸ್ವಲ್ಪ ಕಲ್ಲು ಸಕ್ಕರೆ ಸೇರಿಸಿ, ನಿತ್ಯ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪುಸ್ತಕದ ಪುಟಗಳ ನಡುವೆ ದಪ್ಪಗಿನ ಎಲೆಯನ್ನು ಇಟ್ಟುಕೊಂಡರೆ ಅಲ್ಲೇ ಚಿಗುರುಬಿಟ್ಟು ಸೋಜಿಗ ಉಂಟುಮಾಡುವ ಕಾಡುಬಸಳೆಯ ಎಲೆಯ ರಸ ಹತ್ತು ಎಮ್ಲ್ನಷ್ಟು ದಿನಕ್ಕೆರಡು ಬಾರಿ ಸೇವಿಸುವುದೂ ಪ್ರಯೋಜನಕಾರಿ. ನೆಗ್ಗಿನ ಮುಳ್ಳಿನ ಕಷಾಯ, ವರುಣಗಿಡದ ಕಷಾಯ, ಹುರುಳಿ ಸಾರು ಇವೆಲ್ಲವೂ ಮೂತ್ರ ಕಲ್ಲನ್ನು ದೇಹದಿಂದ ಉಚ್ಚಾಟಿಸಲು ಸಹಕಾರಿಯಾಗಿರುವ ನೂರಾರು ಮನೆಮದ್ದುಗಳಲ್ಲಿ ಸೇರಿವೆ.
(ಪ್ರತಿಕ್ರಿಯಿಸಿ: ಡಡಠ್ಠಛಜ್ಞಿಚಃಜಞಚಜ್ಝಿ.ಟಞ)