ಸುದ್ದಿ ಸಮಗ್ರ: ರೋಗನಿರೋಧಕ ಶಕ್ತಿವರ್ಧನೆಗೆ ಮನೆಯಲ್ಲೇ ಮದ್ದು; ಕರೊನಾ ಎದುರಿಸಲು ಆಯುರ್ವೆದ ಸಲಹೆ

page 9 2
Published on

ನವದೆಹಲಿ: ದೇಶವನ್ನು ತಲ್ಲಣಗೊಳಿಸಿರುವ ಕರೊನಾ ಮಹಾಮಾರಿ ತಗುಲದಂತೆ ತಡೆಯಲು ಕೇಂದ್ರ ಆಯುಷ್ ಸಚಿವಾಲಯ ಹಲವು ಸಲಹೆ ನೀಡಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿ ಕಾಯಿಲೆ ಬಾರದಂತೆ ತಡೆಯುವ ಮುನ್ನೆಚ್ಚರಿಕೆಯ ಉಪಕ್ರಮವಾಗಿದೆ. ಭಾರತೀಯ ವೈದ್ಯ ಪದ್ಧತಿಯ ಆಯುರ್ವೆದ ಪ್ರತಿಪಾದಿಸಿರುವ ಪ್ರಕೃತಿಯ ಕೊಡುಗೆ ಉತ್ತಮ ಆರೋಗ್ಯ ಹಾಗೂ ಸಂತಸದಾಯಕ ಜೀವನ ನಡೆಸಲು ಉತ್ತಮ ವಿಧಾನ ಎಂದಿರುವ ಸಚಿವಾಲಯ, ಆರೋಗ್ಯ ರಕ್ಷಣೆಗೆ ಸ್ವಯಂ ಮನೆಯಲ್ಲೇ ಮದ್ದು ಇದೆ ಎಂದು ತಿಳಿಸಿದೆ. ಕರೊನಾ ಸೋಂಕು ಗುಣಪಡಿಸಲು ಸದ್ಯ ಯಾವುದೇ ನಿಖರ ಔಷಧ ಇಲ್ಲದಿರುವುದರಿಂದ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ವಿಧಾನಗಳನ್ನು ಅಳವಡಿಸಿಕೊಳ್ಳುವುದೇ ಜಾಣತನ ಎಂದೂ ಹೇಳಿದೆ. ಆರೋಗ್ಯ ಬಿಕ್ಕಟ್ಟಿನ ಈ ಸಮಯದಲ್ಲಿ ದೇಶದ ಜನರು ಈ ಟಿಪ್ಸ್ ಪಾಲಿಸುವಂತೆ ಸರ್ಕಾರ ಮನವಿ ಮಾಡಿದೆ. ‘ರೋಗ ವಾಸಿ ಮಾಡುವುದಕ್ಕಿಂತ ಅದು ಬಾರದಂತೆ ತಡೆಯುವುದೇ ವಾಸಿ’ (ಪ್ರಿವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್) ಎಂಬ ಸಿದ್ಧಾಂತದ ಮೇರೆಗೆ ಇದನ್ನು ಸಲಹೆ ಮಾಡಿದೆ.

ಸಾಂಪ್ರದಾಯಿಕ ಔಷಧ: ಆಯುಷ್ ಸಚಿವಾಲಯದ ಉಪಕ್ರಮದ ಮೇರೆಗೆ ಅನೇಕ ರಾಜ್ಯ ಸರ್ಕಾರಗಳು ಸೋಂಕು ನಿರೋಧಕ ಹಾಗೂ ರೋಗನಿರೋಧಕ ಶಕ್ತಿ ವರ್ಧನೆಗೆ ಸಾಂಪ್ರದಾಯಿಕ ಔಷಧಿ ಪರಿಹಾರೋಪಾಯಗಳನ್ನು ಅನುಸರಿಸುತ್ತಿವೆ. ಕೋವಿಡ್-19 ಮಹಾಮಾರಿಯ ಹಿನ್ನೆಲೆಯಲ್ಲಿ ಇದು ಹೆಚ್ಚು ಪ್ರಸ್ತುತವಾಗಿದೆ. ಕರೊನಾ ಎದುರಿಸಲು ರೂಪಿಸಲಾಗುವ ದೇಶದ ಎಲ್ಲ ಜಿಲ್ಲಾ ಮಟ್ಟದ ತುರ್ತು ಯೋಜನೆಗಳಲ್ಲಿ ಆಯುಷ್ ಪರಿಹಾರಗಳನ್ನು ಕೂಡ ಸೇರಿಸುವಂತೆ ಆಯುಷ್ ಸಚಿವಾಲಯ ಸಲಹೆ ಮಾಡಿದೆ. ವಿವಿಧ ಆಯುಷ್ ಪದ್ಧತಿಗಳನ್ನು ಅನುಸರಿಸುವವರು ಪಾಲಿಸಬೇಕಾದ ಕರಡು ಮಾರ್ಗದರ್ಶಿ ಸೂತ್ರಗಳನ್ನು ಸಚಿವಾಲಯ ರೂಪಿಸಿದೆ.

ಸಾಮಾನ್ಯ ಕ್ರಮಗಳು

* ಬೆಚ್ಚಗಿನ ನೀರು ಕುಡಿಯಿರಿ

* ಪ್ರತಿದಿನ ಕನಿಷ್ಠ 30 ನಿಮಿಷ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಮಾಡಿ

* ಅರಿಶಿನ, ಜೀರಿಗೆ, ಧನಿಯಾ ಮತ್ತು ಬೆಳ್ಳುಳ್ಳಿಯಂಥ ಸಾಂಬಾರ ಪದಾರ್ಥಗಳನ್ನು ಅಡುಗೆಯಲ್ಲಿ ಬಳಸಿ

ಸಲಹೆಗಳು

* ಪ್ರತಿದಿನ ಬೆಳಿಗ್ಗೆ 10 ಗ್ರಾಂ (ಒಂದು ಟೀ ಚಮಚ) ಚ್ಯವನಪ್ರಾಶನ ಸೇವನೆ. ಮಧುಮೇಹಿಗಳು ಸಕ್ಕರೆ ರಹಿತ ಚ್ಯವನಪ್ರಾಶನ ಸೇವಿಸಬೇಕು.

* ತುಳಸಿ, ದಾಲ್ಚಿನಿ, ಕಾಳುಮೆಣಸು, ಶುಂಠಿ, ಒಣದ್ರಾಕ್ಷಿ ಮೊದಲಾದ ಗಿಡಮೂಲಿಕೆಯ ಚಹಾ/ಡಿಕಾಕ್ಶನ್ ದಿನಕ್ಕೆ ಎರಡು ಬಾರಿ ಸೇವನೆ. ರುಚಿಗಾಗಿ ಬೆಲ್ಲ ಅಥವಾ ನಿಂಬೆ ರಸ ಸೇರಿಸಬಹುದು.

* 150 ಮಿ.ಲೀ. ಹಾಲಿಗೆ ಅರ್ಧ ಚಮಚ ಅರಿಶಿನ ಪುಡಿ ಸೇರಿಸಿ ಸೇವನೆ- ದಿನಕ್ಕೆ ಒಂದು ಅಥವಾ ಎರಡು ಸಲ ತೆಗೆದುಕೊಳ್ಳಿ.

* ಸಾಸಿವೆ ಎಣ್ಣೆ, ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಮೂಗಿನ ಹೊಳ್ಳೆಗಳಿಗೆ ಬೆಳಿಗ್ಗೆ ಮತ್ತು ಸಂಜೆ ಸವರಿ.

ಗಂಟಲು ಕೆರೆತಕ್ಕೆ ಹೀಗೆ ಮಾಡಿ...

1. ಪುದಿನ ಅಥವಾ ಓಂಕಾಳಿನ (ಅಜ್ವಾನ್) ತಾಜಾ ಎಲೆಯನ್ನು ಬಿಸಿ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳಬೇಕು. ದಿನದಲ್ಲಿ ಒಂದು ಬಾರಿ ಇದನ್ನು ಮಾಡಿದರೆ ಸಾಕು.

2. ಸಕ್ಕರೆ ಅಥವಾ ಜೇನುತುಪ್ಪದಲ್ಲಿ ಲವಂಗ ಪುಡಿ ಸೇರಿಸಿ ದಿನದಲ್ಲಿ ಎರಡರಿಂದ ಮೂರು ಬಾರಿ ಸೇವನೆ. ಇದರಿಂದ ಸಾಮಾನ್ಯವಾಗಿ ಒಣ ಕೆಮ್ಮು ಅಥವಾ ಗಂಟಲು ಕೆರೆತ ವಾಸಿ ಆಗುತ್ತದೆ. ಈ ಲಕ್ಷಣಗಳು ಹೆಚ್ಚಾದರೆ ವೈದ್ಯರನ್ನು ಸಂರ್ಪಸುವುದು ಉತ್ತಮ.

ಆಯಿಲ್ ಪುಲ್ಲಿಂಗ್: ಒಂದು ಚಮಚ ಸಾಸಿವೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಬಾಯಿಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಮುಕ್ಕಳಿಸಬೇಕು (ಆಯಿಲ್ ಪುಲ್ಲಿಂಗ್). ನಂತರ ಅದನ್ನು ಉಗಿದು ಬೆಚ್ಚಗಿನ ನೀರಿನಿಂದ ಬಾಯಿ ತೊಳೆಯಬೇಕು. ದಿನದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net