ಧನ್ವಂತರಿ: ಅಸ್ತಮಾ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ

aSTHAMA
Published on

ಮಳೆಗಾಲ ಶುರುವಾಗುತ್ತಿದೆ. ಮೋಡ ಕವಿಯುತ್ತಿದ್ದಂತೆಯೇ ಎಷ್ಟೋ ಪ್ರಾಣಿಪಕ್ಷಿಗಳು ಸಂಭ್ರಮಪಡುತ್ತವೆ. ಆದರೆ ಅಲರ್ಜಿ, ಅಸ್ತಮಾ ಇರುವ ರೋಗಿಗಳಿಗೆ ಈ ಕಾಲ ತುಂಬ ಕಷ್ಟದಾಯಕ. ಹಾಗಾಗಿ ಈ ಕಾಲವನ್ನು ಎದುರಿಸಲು ಯಾವ್ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

ಅಲರ್ಜಿ, ಅಸ್ತಮಾ, ಕೆಮ್ಮು, ಸೈನಸ್ ಸಮಸ್ಯೆಗಳು ಆನುವಂಶೀಯವಾಗಿ ಬರುತ್ತವಾದರೂ ಬಹುತೇಕ ಸಲ ಜೀವನಶೈಲಿಯೇ ಮುಖ್ಯ ಕಾರಣ. ಹಾಗಾಗಿ ಅಸ್ತಮಾ ಹತೋಟಿಯಲ್ಲಿಟ್ಟುಕೊಂಡು ಯಾವುದೇ ಔಷಧವನ್ನೂ ಬಳಸದೆ ಕೊನೆಯವರೆಗೂ ಬದುಕಬೇಕೆಂದರೆ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಪ್ರತಿದಿನ ಸೂರ್ಯನಮಸ್ಕಾರದಂತಹ ಯೋಗಾಸನಗಳನ್ನು ಮಾಡಬೇಕು. ಬಹುಶಃ ಅಸ್ತಮಾವನ್ನು ಹತೋಟಿಯಲ್ಲಿಡಲು ಪ್ರಾಣಾಯಾಮದಷ್ಟು ಪರಿಣಾಮಕಾರಿ ವಿಧಾನ ಇನ್ನೊಂದಿರಲಿಕ್ಕಿಲ್ಲ. ಹಾಗಾಗಿ ನಿತ್ಯ ಪ್ರಾಣಾಯಾಮ ಬೇಕೇ ಬೇಕು. ಬೆಳಗ್ಗೆ ಸಮಯ ಸಾಲದೆ ಹೋದರೆ ಸಂಜೆಯಾದರೂ ಮಾಡಲೇಬೇಕು. ನಮಗೆ ಸಾಮಾಜಿಕ ಜಾಲತಾಣ ನೋಡಲು ಹತ್ತು ನಿಮಿಷ ಸಮಯವಿದ್ದರೂ ಐದು ನಿಮಿಷ ಕಪಾಲಭಾತಿ ಮಾಡಲು ಸಮಯವಿಲ್ಲವೆಂದು ನಾಳೆಗೆ ಮುಂದೂಡುತ್ತೇವೆ. ನಾವೇ ರೋಗ ಬೆಳೆಯಲು ಬಿಡುತ್ತೇವೆ. ಜಲನೇತಿ, ಸೂತ್ರನೇತಿಗಳಂಥ ಕ್ರಿಯೆಗಳನ್ನು ನಿಯತವಾಗಿ ಮನೆಯಲ್ಲೇ ಮಾಡುವುದರಿಂದ ಅನುಕೂಲವಾಗುವುದಲ್ಲದೆ ಪ್ರಾರಂಭಿಕ ಹಂತದ ಸೈನಸ್, ಅಲರ್ಜಿ, ಅಸ್ತಮಾ ಸಮಸ್ಯೆಗಳು ಇವುಗಳಿಂದಲೇ ವಾಸಿಯಾಗಿಬಿಡುತ್ತವೆ.

ಕಾಲಕಾಲಕ್ಕೆ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು. ದಿನದ ಕೆಲವು ಸಮಯವಾದರೂ ದೈಹಿಕ ಶ್ರಮವಿರುವ ಕೆಲಸ ಮಾಡಬೇಕು. ಹಿಂದಿನವರೆಲ್ಲ ಹಬ್ಬದ ದಿನಗಳ ಹೊರತಾಗಿ ಮತ್ತೆಲ್ಲ ದಿನಗಳಲ್ಲೂ ಲಘುಭೋಜನವನ್ನೇ ಮಾಡುತ್ತಿದ್ದರು. ಹಾಗೆ ಜೀರ್ಣಕ್ಕೆ ಸುಲಭವಾದ ಆಹಾರವನ್ನೇ ನಿತ್ಯ ಸೇವಿಸುವುದರಿಂದ ಮೊದಲೇ ಇಲ್ಲದಿದ್ದರೆ ಅಸ್ತಮಾದಂತಹ ಸಮಸ್ಯೆಗಳು ಬರುವುದಿಲ್ಲ; ಇದ್ದರೆ ಉಲ್ಬಣಗೊಳ್ಳುವುದಿಲ್ಲ. ಜೀರ್ಣಕ್ಕೆ ತುಂಬ ಕಷ್ಟವಾದ, ಕರಿದ, ಕೃತಕವಾಗಿ ತಂಪಾಗಿಸಿದ ಆಹಾರಗಳನ್ನೇ ಹೆಚ್ಚಾಗಿ ಸೇವಿಸುವುದು, ಮೊದಲಿನ ಆಹಾರ ಜೀರ್ಣವಾಗುವ ಮೊದಲೇ ಮತ್ತೆ ಆಹಾರ ಸೇವಿಸುವುದು, ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದು ಇಂತಹ ರೂಢಿಗಳನ್ನು ಬಿಡಬೇಕು. ಹಗಲು ನಿದ್ರೆ ಮಾಡುವ ರೂಢಿಯಿದ್ದರೆ ಆ ಅವಧಿಯನ್ನು ಕಡಿಮೆ ಮಾಡುತ್ತ ಬಂದು ಪೂರ್ತಿಯಾಗಿ ಬಿಟ್ಟುಬಿಡಬೇಕು. ರಾತ್ರಿ ಅತ್ಯಂತ ಲಘು ಭೋಜನ ಮಾಡಬೇಕು. ರಾತ್ರಿ ಊಟದ ನಂತರ ಕನಿಷ್ಠ ಒಂದು ತಾಸಿನ ನಂತರ ಮಲಗಬೇಕು.

ಇನ್ನು ಅಸ್ತಮಾ ತೀವ್ರಾವಸ್ಥೆಯಲ್ಲಿದ್ದು ವೈದ್ಯರನ್ನು ಭೇಟಿಯಾಗಲು ಅಸಾಧ್ಯವಾದಾಗ ಸಾಸಿವೆ ಎಣ್ಣೆಗೆ ಉಪ್ಪು ಸೇರಿಸಿ ಬಿಸಿಮಾಡಿ, ಎದೆಗೆ, ಬೆನ್ನಿಗೆ ಮಸಾಜ್ ಮಾಡಿ, ಆ ಜಾಗಗಳಿಗೆ ನೀರಿನ ಹಬೆಯನ್ನು ಕೊಡಬೇಕು. ನೀರಿಗೆ ನೀಲಗಿರಿ ಎಣ್ಣೆಯನ್ನು ಬಿಟ್ಟು ಹಬೆ ಕೊಟ್ಟರೆ ಹೆಚ್ಚು ಪರಿಣಾಮಕಾರಿ. ದಮ್ಮಿನ ತೀವ್ರತೆಯಿಲ್ಲದ ಸಂದರ್ಭದಲ್ಲಿ ಮೇಲೆ ಹೇಳಿದ ಎಲ್ಲ ಮುನ್ನೆಚ್ಚರಿಕೆಗಳ ಜತೆಗೆ ಕೆಲವು ಮನೆಮದ್ದುಗಳನ್ನು ಮಾಡಿದರೆ ತುಂಬ ಸಹಾಯವಾಗುತ್ತದೆ. ಟೀ, ಕಾಫಿಗಳ ಬದಲಿಗೆ ಶುಂಠಿ, ಹಿಪ್ಪಲಿ, ಜ್ಯೇಷ್ಠಮಧುಗಳ ಕಷಾಯ ಕುಡಿಯಬಹುದು. ಕಫ ಸರಿಯಾಗಿ ಹೊರಗೆ ಬರದೆ ತೊಂದರೆಯಾಗುತ್ತಿದ್ದರೆ ಆಡುಮುಟ್ಟದ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ರಾತ್ರಿ 3-4 ಅಂಜೂರಗಳನ್ನು ನೆನೆಸಿ ಬೆಳಗ್ಗೆ ಸೇವಿಸಬೇಕು.

ಒಂದು ವೀಳ್ಯದೆಲೆಯಲ್ಲಿ ಐದು ತುಳಸಿ ಎಲೆ, ಒಂದು ಲವಂಗ, ಒಂದು ಚೂರು ಜ್ಯೇಷ್ಠಮಧು ಹಾಕಿ ಪ್ರತಿ ಬಾರಿ ಊಟದ ನಂತರ ಒಂದು ವಾರ ಕಾಲ ಸೇವಿಸಬೇಕು. ಸಮಪ್ರಮಾಣದಲ್ಲಿ ಕಾಳುಮೆಣಸು, ಶುಂಠಿ, ಹಿಪ್ಪಲಿಗಳ ಅರ್ಧ ಚಮಚ ಮಿಶ್ರಣಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ನಿತ್ಯ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ; ಅಸ್ತಮಾ ಹತೋಟಿಯಲ್ಲಿರುತ್ತದೆ. ಕೋವಿಡ್-19 ರೋಗವು ಹರಡುತ್ತಿರುವ ಈ ಸಂದರ್ಭದಲ್ಲಿ ಸಣ್ಣಪುಟ್ಟ ಉಸಿರಾಟದ ಸಮಸ್ಯೆಯನ್ನೂ ನಿರ್ಲಕ್ಷಿಸದೆ, ಮನೆಮದ್ದಿನಲ್ಲಿ ಕಾಲಹರಣ ಮಾಡದೆ ವೈದ್ಯರೊಡನೆ ಸಮಾಲೋಚಿಸಿ ಅವರ ಸಲಹೆಯಂತೆ ನಡೆದುಕೊಳ್ಳಬೇಕಾದುದು ನಮ್ಮ ಜವಾಬ್ದಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net