

ನವದೆಹಲಿ: ಅಯೋಧ್ಯೆ ಶ್ರೀ ರಾಮಮಂದಿರದ ಮೊದಲನೇ ಮಹಡಿಯ ರಾಮ ದರ್ಬಾರಿನಲ್ಲಿ ಪ್ರಾಣಪ್ರತಿಷ್ಠೆ ಗುರುವಾರ ಸಂಪನ್ನಗೊಂಡಿದೆ. ಬೆಳಗ್ಗೆ 11ರಿಂದ ವಿಶೇಷ ಪ್ರಾರ್ಥನೆ, ಧಾರ್ವಿುಕ ವಿಧಿ-ವಿಧಾನಗಳ ಮೂಲಕ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ 101 ಪುರೋಹಿತರ ಉಪಸ್ಥಿತಿಯಲ್ಲಿ ನೆರವೇರಿತು. ಇದು 2024ರ ಜ. 22ರಂದು ನಡೆದ ಶ್ರೀ ಬಾಲರಾಮ ಪ್ರಾಣಪ್ರತಿಷ್ಠಾಪನೆ ಬಳಿಕ ನಡೆದ ಎರಡನೇ ದೊಡ್ಡ ಪ್ರಾಣಪ್ರತಿಷ್ಠಾಪನೆ ಆಗಿದೆ.
ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಾನ್ ಜತೆ ಶ್ರೀ ರಾಮ ವಿರಾಜಮಾನ ವಾಗಿರುವ ರಾಮ ದರ್ಬಾರ್ ಪ್ರತಿಮೆಯನ್ನು ಮಂದಿರದ ಮೊದಲ ಮಹಡಿಯಲ್ಲಿ ಪ್ರತಿಷ್ಠಾಪಿಸ ಲಾಯಿತು. ಅಲ್ಲದೆ, ಸೂರ್ಯದೇವ, ಗಣೇಶ, ಹನುಮಾನ್, ಶಿವ (ಭೋಲೇನಾಥ), ಮಾತಾ ಭಗವತಿ ಮತ್ತು ಮಾತಾ ಅನ್ನಪೂರ್ಣ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಯಿತು. ಇದರೊಂದಿಗೆ ರಾಮ ಮಂದಿರದ ಸಂಕೀರ್ಣದಲ್ಲಿನ ದೇವಾಲಯಗಳಲ್ಲಿ 7 ಮೂರ್ತಿಗಳ ಪ್ರತಿಷ್ಠಾಪನೆ ನಡೆದಿದ್ದು, ಸಂಕೀರ್ಣದಲ್ಲೀಗ ಒಟ್ಟು 8 ಮಂದಿರಗಳು ಆದಂತಾಗಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಯೋಜಿಸಿದ್ದ ಈ ಸಮಾರಂಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಖ್ಯ ಅತಿಥಿಯಾಗಿ ಭಾಗಿಯಾದರು. ಇದಕ್ಕೂ ಮುನ್ನ ಅವರು ರಾಮಕಥಾ ಉದ್ಯಾನ, ಹನುಮಾನ್ ಘಡಿಗೆ ಭೇಟಿ ನೀಡಿದ್ದರು. ಕಾಕತಾಳೀಯವಾಗಿ, ಯೋಗಿ ಆದಿತ್ಯನಾಥ ಅವರ ಜನ್ಮದಿನವೂ ಈ ಗುರುವಾರವೇ ಆಗಿದೆ.
ಶ್ರೀ ರಾಮ ದರ್ಬಾರ್ ಹಾಗೂ ನೂತನವಾಗಿ ಪ್ರತಿಷ್ಠಾಪಿತ ಇತರ ದೇಗುಲಗಳಿಗೆ ಸಾರ್ವಜನಿಕರಿಗೆ ಯಾವತ್ತಿನಿಂದ ಪ್ರವೇಶ ನೀಡಬೇಕು ಎನ್ನುವ ಕುರಿತು ಶನಿವಾರ ನಿರ್ಧರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಗುರುವಾರದ ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ ಎಂದು ಜಿಲ್ಲಾಧಿಕಾರಿ ನಿಖಿಲ್ ಟಿಕಾರಾಮ್ ಫುಂಡೆ ತಿಳಿಸಿದ್ದಾರೆ.